ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದಾಗಿ ರದ್ದಾಗುವ ಆತಂಕ ಮೂಡಿಸಿದ್ದ ಐಪಿಎಲ್ 2020 ಟೂರ್ನಿಯನ್ನು ಅಕ್ಟೋಬರ್-ನವೆಂಬರ್ ನಲ್ಲಿ ಯುಎಇನಲ್ಲಿ ಆಯೋಜನೆ ಮಾಡುವ ಕುರಿತು ಬಿಸಿಸಿಐ ಚಿಂತನೆಯಲ್ಲಿ ತೊಡಗಿದೆ.
ಈ ಬಗ್ಗೆ ಬಿಸಿಸಿಐನ ಮೂಲಗಳು ಮಾಹಿತಿ ನೀಡಿದ್ದು, ಇಮೆರೇಟ್ಸ್ ಕ್ರಿಕೆಟ್ ಬೋರ್ಡ್ ತಮ್ಮ ದೇಶದ ಮೂರು ಕ್ರೀಡಾಂಗಣಗಳಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಮುಂದಾಗಿದೆ. ಭಾರತದಲ್ಲಿ ಮಾರಕ ಕೊರೋನಾ ವೈರಸ್ ನಿಂದಾಗಿ ದೇಶದಲ್ಲಿ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳು ಸ್ಛಗಿತಗೊಂಡಿವೆ. ಅಲ್ಲದೆ ದಿನೇ ದಿನೇ ದೇಶಾದ್ಯಂತ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ ಐಪಿಎಲ್ ಆಯೋಜನೆ ಕನಸಿನ ಮಾತೇ ಸರಿ.
ಇದೇ ಕಾರಣಕ್ಕೆ ಬಿಸಿಸಿಐ ಯುಎಇನಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಮುಂದಾಗಿದೆ ಎನ್ನಲಾಗಿದೆ. ಇದರಿಂದ ಬಿಸಿಸಿಐಗೆ ಆಗುವ ಸಾವಿರಾರು ಕೋಟಿ ರೂಗಳ ನಷ್ಟ ತಪ್ಪಲಿದ್ದು, ಫ್ರಾಂಚೈಸಿಗಳೂ ಕೂಡ ನಷ್ಟದ ಆತಂಕದಿಂದ ಹೊರಬರಲಿದ್ದಾರೆ. ಈ ಬಗ್ಗೆ ಐಸಿಸಿ ಅಂತಿಮ ತೀರ್ಮಾನ ಮಾಡಬೇಕಿದೆ. ಟಿ20 ವಿಶ್ವಕಪ್ ಕುರಿತು ಐಸಿಸಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಐಪಿಎಲ್ ಭವಿಷ್ಯ ಅಡಗಿದೆ ಎಂದು ಬಿಸಿಸಿಐ ಸದಸ್ಯರೊಬ್ಬರು ತಿಳಿಸಿದ್ದಾರೆ.
Follow us on Social media