ಮುಂಬೈ : ದೀವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಹೆಚ್‌ಎಫ್‌ಎಲ್) ನಿಂದ ಯಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಕುಟುಂಬ ಸದಸ್ಯರಿಗೆ ೬೦೦ ಕೋಟಿ ಲಂಚ ಪಾವತಿಸಿದ್ದ ಆರೋಪ ಸಂಬಂಧ ಕೇಂದ್ರೀಯ ತನಿಖಾ ಸಂಸ್ಥೆ -ಸಿಬಿಐ ಸೋಮವಾರ ಮುಂಬೈನ ಏಳು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧನೆ ನಡೆಸುತ್ತಿದೆ.
ರಾಣಾ ಕಪೂರ್ ಅವರ ನಿವಾಸ ಹಾಗೂ ಕಛೇರಿ ಸೇರಿದಂತೆ ಮುಂಬೈನ ಏಳು ಸ್ಥಳಗಳಲ್ಲಿ ಶೋಧನೆ ಪ್ರಗತಿಯಲ್ಲಿದೆ ಎಂದು ಸಿಬಿಐನ ಮುಖ್ಯ ಮಾಹಿತಿ ಆಯುಕ್ತರು ತಿಳಿಸಿದ್ದಾರೆ.
ಡಿಎಚ್‌ಎಫ್ ಎಲ್ ಪ್ರವರ್ತಕ ಕಪಿಲ್ ವಾದ್ವಾನ್ ಅವರೊಂದಿಗೆ ಕ್ರಿಮಿನಲ್ ಸಂಚು ನಡೆಸಿರುವ ಕಪೂರ್, ಬ್ಯಾಂಕ್ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳದೆ ಇದಕ್ಕೆ ಪ್ರತಿಫಲವಾಗಿ ತಮ್ಮ ಕುಟುಂಬ ಸದಸ್ಯರ ಮಾಲಿಕತ್ವದ ಕಂಪನಿಗೆ ಹಣಕಾಸು ನೆರವು ಪಡೆದುಕೊಂಡಿದ್ದಾರೆ ಎಂದು ದೂರಲಾಗಿದೆ.
ಸಿಬಿಐ ದಾಖಲಿಸಿರುವ ಎಫ್‌ಐಆರ್ ನಂತೆ, ಹಗರಣ ಪೀಡಿತ ದೀವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್ ಅಲ್ಪಾವಧಿಯ ಡಿಬೆಂಚರ್ ಗಳಲ್ಲಿ ಯಸ್ ಬ್ಯಾಂಕ್ ೨೦೧೮ರ ಏಪ್ರಿಲ್ ಹಾಗೂ ಜೂನ್ ನಡುವೆ ೩,೭೦೦ ಕೋಟಿ ಹೂಡಿಕೆ ಮಾಡುವ ಮೂಲಕ ಹಗರಣ ಆರಂಭಗೊಂಡಿದೆ ಎಂದು ದೂರಿದೆ.
ಇದಕ್ಕೆ ಪ್ರತಿಯಾಗಿ ವಾದ್ವಾನ್, ಡೂಐಟಿ ಅರ್ಬನ್ ವೆಂಚರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಗೆ ಸಾಲದ ರೂಪದಲ್ಲಿ ಕಪೂರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ೬೦೦ ಕೋಟಿರೂಪಾಯಿ ಲಂಚಪಾವತಿಸಿದೆ ಎಂದು ಆರೋಪಿಸಲಾಗಿದೆ.
Source : UNI
Follow us on Social media