ನವದೆಹಲಿ: ಭಾರತ- ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸರ್ಕಾರದ ಹೇಡಿತನದ ಕ್ರಮಗಳಿಂದ ಭಾರತ ಭಾರೀ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ಗಾಂಧಿ, ‘ಚೀನಾ ನಮ್ಮ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ. ಭಾರತ ಸರ್ಕಾರ ಚೇಂಬರ್ಲೇನ್ ವರ್ತಿಸುತ್ತಿದೆ. ಇದು ಚೀನಾದಲ್ಲಿ ಮತ್ತಷ್ಟು ಧೈರ್ಯ ತುಂಬುತ್ತದೆ. ಕೇಂದ್ರ ಸರ್ಕಾರದ ಹೇಡಿತನದ ಕ್ರಮಗಳಿಂದಾಗಿ ಭಾರತ, ಭಾರೀ ಬೆಲೆ ತೆರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
1930 ರ ದಶಕದಲ್ಲಿ ಅಡಾಲ್ಫ್ ಹಿಟ್ಲರ್ ಮತ್ತು ಜರ್ಮನಿಯ ಬಗ್ಗೆ ಓಲೈಸು ನೀತಿಯನ್ನು ಅನುಸರಿಸಿದ ದಿವಂಗತ ಬ್ರಿಟಿಷ್ ಪ್ರಧಾನಿ ನೆವಿಲ್ಲೆ ಚೇಂಬರ್ಲೇನ್ ಅವರನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.
ಲಡಾಖ್ ಮತ್ತು ಶ್ರೀನಗರಕ್ಕೆ 2 ದಿನಗಳ ಭೇಟಿಯಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇಹ್ಗೆ ಆಗಮಿಸಿದ್ದು, ಟಿ -90 ಟ್ಯಾಂಕ್ಗಳು ಮತ್ತು ಯುದ್ಧ ವಾಹನಗಳ ವ್ಯಾಯಾಮ, ಕಸರತ್ತನ್ನು ಲೇಹ್ನ ಸ್ಟಕ್ನಾದಲ್ಲಿ ವೀಕ್ಷಿಸಿದರು.
ಲುಕುಂಗ್ ಫಾರ್ವರ್ಡ್ ಬೇಸ್ನಲ್ಲಿರುವ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಐಟಿಬಿಪಿಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಸಿಂಗ್, “ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಯುತ್ತಿದೆ ಆದರೆ ಅದನ್ನು ಎಷ್ಟರ ಮಟ್ಟಿಗೆ ಪರಿಹರಿಸಬಹುದೆಂದು ನಾನು ಖಾತರಿಪಡಿಸುವುದಿಲ್ಲ. ನಾನು ನಿಮಗೆ ಭರವಸೆ ನೀಡಬಲ್ಲೆ, ನಮ್ಮ ಭೂಮಿಯ ಒಂದು ಇಂಚು ಸಹ ಜಗತ್ತಿನ ಯಾವುದೇ ಶಕ್ತಿಯಿಂದ ಕಸಿದುಕೊಳ್ಳಲಾಗುವುದಿಲ್ಲ. ಮಾತುಕತೆಯಿಂದ ಪರಿಹಾರವನ್ನು ಕಂಡುಹಿಡಿಯಬಹುದಾದರೆ, ಇದಕ್ಕಿಂತ ಉತ್ತಮ ಅವಕಾಶ ಬೇರೆ ಏನು ಇಲ್ಲ ಎಂದು ಹೇಳಿದ್ದರು.
Follow us on Social media