ಹೈದರಾಬಾದ್: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಳವಾರ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಾಜರಾಗಬಾರದು. ಏಕೆಂದರೆ ಅವರು ಪ್ರಧಾನಿಯಾಗಿ ಆ ಕಾರ್ಯಕ್ರಮಕ್ಕೆ ಹಾಜರಾದರೆ, ದೇಶದಲ್ಲಿ ಪ್ರಧಾನಿ ಒಂದು ನಂಬಿಕೆಯನ್ನುಳ್ಳ ವರ್ಗದ ಜನರಿಗೆ ಮಾತ್ರ ಬೆಂಬಲ ನೀಡುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಓವೈಸಿ ವರದಿಗಾರರಿಗೆ ತಿಳಿಸಿದ್ದಾರೆ.
ಮೋದಿ ಅವರು ತಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಿದರೆ, ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಪ್ರತಿ ಪ್ರಧಾನಿಯೂ ಒಂದು ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿರುತ್ತಾರೆ. ಆದರೆ ಪ್ರಧಾನಿಯೂ ಸಾಂವಿಧಾನಿಕ ಮುಖ್ಯಸ್ಥರಾಗಿರುತ್ತಾರೆ ಮತ್ತು ಸಂವಿಧಾನವು ಜಾತ್ಯತೀತತೆಯ ಮೂಲ ರಚನೆಗೆ ಸಂಬಂಧಿಸಿದೆ ಎಂದು ಓವೈಸಿ ಹೇಳಿದ್ದಾರೆ.
ಮೋದಿ ಅವರು ತಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಲೇಬೇಕು ಮತ್ತು ಯಾವುದೇ ಟಿವಿ ಚಾನೆಲ್ಗಳು ಅದನ್ನು ನೇರ ಪ್ರಸಾರ ಮಾಡಬಾರದು ಎಂದು ಓವೈಸಿ ಒತ್ತಾಯಿಸಿದ್ದಾರೆ.
‘ದೇಶಕ್ಕೆ ಯಾವುದೇ ಧರ್ಮವಿಲ್ಲ. ಭಾರತ ಮತ್ತು ಭಾರತ ಸರ್ಕಾರಕ್ಕೆ ಧರ್ಮವಿದೆಯೇ? ಅವರು ಮುಸ್ಲಿಮರು, ಹಿಂದೂಗಳು, ದಲಿತರು, ಹಿಂದುಳಿದವರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ದೇವರನ್ನೇ ನಂಬದವರಿಗೂ ಅವರು ಪ್ರಧಾನಿ’ ಎಂದಿದ್ದಾರೆ.
Follow us on Social media