ಮೂಡುಬಿದಿರೆ : ಅರಣ್ಯ ಸಂಚಾರಿ ದಳವು ಜೂ.1ರಂದು ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಸುಮಾರು ರೂ.4 ಕೋಟಿ ವೆಚ್ಚದ ರಕ್ತ ಚಂದನವನ್ನು ವಶ ಪಡಿಸಿಕೊಂಡು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಈ ಆರೋಪಿಗಳ ಜಾಮೀನನ್ನು ಮೂಡುಬಿದಿರೆ ನ್ಯಾಯಾಲಯ ರದ್ದುಗೊಳಿಸಿದೆ.
ಆಂಧ್ರ ಪ್ರದೇಶದ ಸರ್ಕಾರಿ ಅರಣ್ಯದಿಂದ ಕಡಿದ ರಕ್ತ ಚಂದನದ ದಿಮ್ಮಿಗಳನ್ನು ಲಾರಿಯ ಮೂಲಕ ಮಂಗಳೂರು ಬಂದರಿಗೆ ಸಾಗಿಸಿ ಅಲ್ಲಿಂದ ಸಿಂಗಾಪುರಕ್ಕೆ ಸಾಗಿಸುವ ಯೋಜನೆಯಂತೆ ಈ ಮರಗಳನ್ನು ಕಳ್ಳ ಸಾಗಾಟ ನಡೆಸುತ್ತಿದ್ದಾಗ ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಶ್ರೀಧರ ಪಿ.ನೇತೃತ್ವದ ತಂಡ ಲಾರಿಯನ್ನು ವಶ ಪಡಿಸಿಕೊಂಡು ತಪಾಸಣೆ ನಡೆಸಿದಾಗ ಕಳ್ಳ ಸಾಗಾಟ ಪತ್ತೆಯಾಗಿತ್ತು. ಪ್ರಕರಣದಲ್ಲಿ ಎಂಟು ಜನ ಅಂತರ್ ರಾಜ್ಯ ಆರೋಪಿಗಳ ಪೈಕಿ ಏಳು ಮಂದಿಯನ್ನು ಬಂಧಿಸಿದ್ದು ಓರ್ವ ಪರಾರಿಯಾಗಿದ್ದ.
ಆರೋಪಿಗಳು ಜಾಮೀನು ಕೋರಿ ಮೂಡುಬಿದಿರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಈ ಕುರಿತ ವಾದ ವಿವದವನ್ನು ಆಲಿಸಿದ ಮೂಡುಬಿದಿರೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಮಾಲಾ ಸಿ. ಜಾಮೀನು ಅರ್ಜಿಯನ್ನು ರದ್ದು ಪಡಿಸಿ ಹೆಚ್ಚುವರಿ ಕಲಂಗಳನ್ನು ಅಳವಡಿಸಲು ತನಿಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶೋಭಾ ಎಸ್. ವಾದ ಮಂಡಿಸಿದ್ದರು.