ಮೂಡುಬಿದಿರೆ: ತಾಲೂಕು ಆಡಳಿತ ಸೌಧ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ನಾಳೆ(ಬುಧವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಡುಬಿದಿರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ -ಮಂಗಳೂರು ಉತ್ತರ ಉಪವಿಭಾಗದ ನಿರ್ದೇಶನದಂತೆ ಮೂಡುಬಿದಿರೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಮೂಡುಬಿದಿರೆ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಹೋಗುವ ವಾಹನಗಳು ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲಿನಿಂದ ಸುಭಾಸ್‌ನಗರ ರಸ್ತೆ ಮೂಲಕ ಸಂಚರಿಸುವುದು. ಬಂಟ್ವಾಳ ಕಡೆಯಿಂದ ಬರುವ ವಾಹನಗಳು ಕೀರ್ತಿನಗರ ಜಂಕ್ಷನಲ್ಲಿ ಪ್ರವೇಶಿಸಿ ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲಿನಿಂದ ಸುಭಾಸ್ ನಗರ ರಸ್ತೆಯಾಗಿ ಮುಂದುವರಿಯುವುದು.
ಶಿರ್ತಾಡಿ ಕಡೆಯಿಂದ ಬರುವ ವಾಹನಗಳು ಜೈನ್ ಪೇಟೆಯಿಂದ ಅಲಂಗಾರು ಮಾರ್ಗವಾಗಿ ರಿಂಗ್‌ರೋಡ್ ಮೂಲಕ ಸಂಚರಿಸುವುದು. ಕಾರ್ಕಳ ಕಡೆಯಿಂದ ಬೆಳ್ತಂಗಡಿ ಮತ್ತು ಬಿಸಿರೋಡ್‌ಗೆ ಹೋಗುವ ವಾಹನಗಳು ಜೈನ್ ಪೇಟೆಯಿಂದ ಶಿರ್ತಾಡಿ ರಸ್ತೆಯಲ್ಲಿ ಸಂಚರಿಸಿ ಕೋಟೆಬಾಗಿಲು-ಕೊಡಂಗಲ್ಲು ರಸ್ತೆಯಲ್ಲಿ ಮುಂದುವರಿಯುವುದು. ಕಾರ್ಕಳ ಕಡೆಯಿಂದ ಮೂಡುಬಿದಿರೆ-ಮಂಗಳೂರು ಮತ್ತು ಮುಲ್ಕಿ ಕಡೆಗೆ ಹೋಗುವ ವಾಹನಗಳು ಅಲಂಗಾರ್ ಜಂಕ್ಷನ್ ಬಳಿ ತಿರುಗಿ ರಿಂಗ್‌ರೋಡ್‌ನಲ್ಲಿ ಸಂಚರಿಸುವುದು.
ಮಂಗಳೂರು ಕಡೆಯಿಂದ ಕಾರ್ಕಳ, ಬೆಳ್ಮಣ್ ಕಡೆಗೆ ಹೋಗುವ ವಾಹನಗಳು ರಿಂಗ್ ರೋಡ್ ನಲ್ಲಿ ಸಂಚರಿಸುವುದು. ಮಂಗಳೂರಿನಿಂದ ಮೂಡುಬಿದಿರೆಗೆ ಬರುವ ವಾಹನಗಳು ವಿದ್ಯಾಗಿರಿಯಿಂದ ಮಾಸ್ತಿಕಟ್ಟೆಯಾಗಿ ಲಾವಂತಬೆಟ್ಟು ರಸ್ತೆಯಲ್ಲಿ ಸಂಚರಿಸುವುದು. ಮುಖ್ಯಮಂತ್ರಿ ನಿರ್ಗಮನದವರೆಗೆ ಹಳೆ ಪೊಲೀಸ್ ಠಾಣೆಯಿಂದ ನಿಶ್ಮಿತಾ ಸರ್ಕಲ್ ವರೆಗಿನ ಮುಖ್ಯರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಅಮರಶ್ರೀ ಟಾಕೀಸ್ ಎದುರುಗಡೆಯ ಏಕಮುಖ ರಸ್ತೆಯನ್ನು ದ್ವಿಮುಖ ರಸ್ತೆಯಾಗಿ ಬದಲಾಯಿಸಲಾಗಿದೆ.
ಪಾರ್ಕಿಂಗ್ ಸ್ಥಳಗಳು:ಅತಿಗಣ್ಯರ ವಾಹನಗಳಿಗೆ ತಾಲ್ಲೂಕು ಕಚೇರಿ ಎದುರಿನ ಗೂಡ್ಸ್ ವಾಹನಗಳ ನಿಲುಗಡೆ ಸ್ಥಳದಲ್ಲಿ, ಗಣ್ಯರ ವಾಹನಗಳಿಗೆ ಮತ್ತು ಬಸ್‌ಗಳ ನಿಲುಗಡೆಗೆ ಸ್ವರಾಜ್ಯ ಮೈದಾನದಲ್ಲಿ, ಕಾರು, ದ್ವಿಚಕ್ರ ವಾಹನಗಳಿಗೆ ಜೆಡಿಎಸ್‌ನ ಹಳೆ ಕಚೇರಿ ಹಿಂಬದಿಯ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.