ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, 24 ಗಂಟೆಗಳಲ್ಲಿ ಬರೊಬ್ಬರಿ 769 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 10,527ಕ್ಕೆ ಏರಿಕೆಯಾಗಿದೆ.
ಅಂತೆಯೇ ಮುಂಬೈನಲ್ಲಿ ನಿನ್ನೆ ಒಂದೇ ದಿನ 25 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಮುಂಬೈ ಮಹಾನಗರಿಯೊಂದರಲ್ಲೇ ಸಾವನ್ನಪ್ಪಿದವರ ಸಂಖ್ಯೆ 412ಕ್ಕೆ ಏರಿಕೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮಾಹಿತಿ ನೀಡಿದೆ. ಮುಂಬೈನಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಪತ್ತೆಯಾದ ಬಳಿಕ ಕೇವಲ 56 ದಿನಗಳ ಅಂತರದಲ್ಲೇ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಮಾರ್ಚ್ 11ರಂದು ಮೊದಲು ಸೋಂಕು ಪ್ರಕರಣ ಪತ್ತೆಯಾಗಿತ್ತು. ಬಳಿಕ 49 ದಿನಗಳಲ್ಲೇ ಸಾವಿನ ಸಂಖ್ಯೆ 400 ಗಡಿ ದಾಟಿದೆ.
ಮಾರ್ಚ್ 25ರಿಂದ ಮುಂಬೈನಲ್ಲಿ ಲಾಕ್ ಡೌನ್ ಹೇರಲಾಗಿತ್ತಾದರೂ, ವೈರಸ್ ಸೋಂಕು ಪ್ರಸರಣದ ವೇಗ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಮಹಾರಾಷ್ಟ್ರದ ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ ಮುಂಬೈ ನಗರವೊಂದರಲ್ಲೇ ಶೇ.63.81 ಸೋಂಕಿತರಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ 16,758 ಸೋಂಕು ಪ್ರಕರಣಗಳು ದಾಖಲಾಗಿವೆ. ಅಂತೆಯೇ ಮಹಾರಾಷ್ಟ್ರದಲ್ಲಿ ಈ ವರೆಗೂ 651 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಪ್ರಮಾಣದಲ್ಲೂ ಮುಂಬೈ 412 ಸಾವಿನ ಮೂಲಕ ಶೇ63.28 ಸಾವಿನ ಪ್ರಮಾಣ ತನ್ನಲ್ಲಿಯೇ ಹೊಂದಿದೆ.
ಇನ್ನು ಬುಧವಾರ 159 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಗುಣಮುಖರಾದವರ ಸಂಖ್ಯೆ 2,287ಕ್ಕೆ ಏರಿಕೆಯಾಗಿದೆ.
Follow us on Social media