ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅಂಗೀಕಾರ ನೀಡಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಶಿಕ್ಷಣ ಸಚಿವಾಲಯವೆಂದು ಮರುನಾಮಕರಣ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಳೆದ ವರ್ಷ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಕೆ ಕಸ್ತುರಿರಂಗನ್ ನೇತೃತ್ವದ ಸಮಿತಿಯು ಹೊಸ ಎನ್‌ಇಪಿಯ ಕರಡನ್ನು ಸಲ್ಲಿಸಿತ್ತು.
ಬಳಿಕ ಪ್ರತಿಕ್ರಿಯೆಗಳಿಗಾಗಿ ಕರಡನ್ನು ಸಾರ್ವಜನಿಕ ವಲಯದಲ್ಲಿ ಇರಿಸಲಾಗಿತ್ತು. ಇದಕ್ಕೆ ಎರಡು ಲಕ್ಷಕ್ಕೂ ಹೆಚ್ಚಿನ ಸಲಹೆಗಳು ಸಚಿವಾಲಯಕ್ಕೆ ಬಂದಿದ್ದವು.
ಇದೀಗ ಅಂತಿಮವಾಗಿ ಈ ಕರಡಿಗೆ ಅನುಮೋದನೆ ನೀಡಲಾಗಿದ್ದು, ಸಚಿವಾಲಯವನ್ನು ಶಿಕ್ಷಣ ಸಚಿವಾಲಯವೆಂದು ಮರುನಾಮಕರಣ ಮಾಡಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ಎನ್‌ಇಪಿಯನ್ನು 1986 ರಲ್ಲಿ ರೂಪಿಸಲಾಗಿತ್ತು. 1992 ರಲ್ಲಿ ಮತ್ತೆ ಪರಿಷ್ಕರಿಸಲಾಗಿತ್ತು. 2014 ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿ ಹೊಸ ಶಿಕ್ಷಣ ನೀತಿಯನ್ನು ತನ್ನ ಪ್ರಣಾಳಿಕೆಯ ಭಾಗವಾಗಿಸಿಕೊಂಡಿತ್ತು.
Follow us on Social media