ಕೋಲ್ಕತಾ: ಕೊರೋನಾ ಮಹಾಮಾರಿ ವೈರಸ್’ಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ತಮೋನಾಶ್ ಘೋಷ್ (60) ಬಲಿಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ಸಂತಾಪ ಸೂಚಿಸಿದ್ದಾರೆ.
ತಮೋನಾಶ್ ಘೋಷ್ ಅವರಲ್ಲಿ ಮೇ.23ರಂದು ಕೊರೋನಾ ದೃಢಪಟ್ಟಿತ್ತು. ಸತತ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಘೋಷ್ ಅವರ ಆರೋಗ್ಯ ಸ್ಥಿತಿ ಕೆಲ ದಿನಗಳಿಂದ ತೀವ್ರವಾಗಿ ಹದಗೆಟ್ಟಿತ್ತು. ಇದರಂತೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಘೋಷ್ ಅವರ ಸಾವಿಗೆ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, 35 ವರ್ಷಗಳಿಂದಲೂ ನಮ್ಮ ಜೊತೆ ಇದ್ದ ಅವರೀಗ ಎಲ್ಲರನ್ನೂ ಅಗಲಿದ್ದಾರೆ. ಪಕ್ಷ ಮತ್ತು ಜನರ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅವರ ಪತ್ನಿ ಮತ್ತು ಮಕ್ಕಳಿಗೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಹೇಳಿಕೊಂಡಿದ್ದಾರೆ.
Follow us on Social media