ಬೆಂಗಳೂರು : ಸತತ 43 ದಿನಗಳ ಲಾಕ್ ಡೌನ್ ಬಳಿಕ ಮದ್ಯದಂಗಡಿ ತೆರೆಯಲಾಗಿದೆ ಎಂಬ ಖುಷಿಯಲ್ಲಿ ತೇಲಾಡುತ್ತಿರುವ ಮದ್ಯ ಪ್ರಿಯರ ಕಿಕ್ ಇಳಿಕೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮದ್ಯದ ಮೇಲಿನ ಅಬಕಾರಿ ಸುಂಕದಲ್ಲಿ ಗಣನೀಯ ಏರಿಕೆ ಮಾಡಿದೆ.
ಹೌದು.. ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಬರೋಬ್ಬರಿ 43 ದಿನಗಳ ಬಳಿಕ ಮದ್ಯ ಪ್ರಿಯರ ಬಾಯಿ ತಣಿಸಿದ್ದ ರಾಜ್ಯ ಸರ್ಕಾರ ಇದೀಗ, ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ಮದ್ಯದ ಮೇಲೆ ಕೋವಿಡ್ -19 ಸೆಸ್ ವಿಧಿಸಲಾಗಿದ್ದು, ಇಂದಿನಿಂದ ಮದ್ಯದ ಹೊಸದರ ಜಾರಿಗೆ ಬರಲಿದೆ. ದೆಹಲಿ, ಆಂಧ್ರ ಬೆನ್ನಲ್ಲೇ ಕರ್ನಾಟಕದಲ್ಲೂ ಮದ್ಯ ದುಬಾರಿಯಾಗಿದ್ದು, ಸರ್ಕಾರ ಕೂಡ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ. 17ರಷ್ಟು ಹೆಚ್ಚಿಸಿದೆ. ಬಜೆಟ್‍ನಲ್ಲಿ ಶೇ. 6ರಷ್ಟು ಅಬಕಾರಿ ಸುಂಕ ವಿಧಿಸಲಷ್ಟೇ ತೀರ್ಮಾನಿಸಲಾಗಿತ್ತು. ಆದರೆ ಇದೀಗ ಮದ್ಯದ ಮೇಲೆ ಶೇ. 11ರಷ್ಟು ಕೊರೊನಾ ಸೆಸ್ ವಿಧಿಸಲಾಗಿದೆ. ಆ ಮೂಲಕ ಒಟ್ಟಾರೆಯಾಗಿ ಮದ್ಯದ ಮೇಲೆ ಶೇ.17ರಷ್ಟು ಸುಂಕ ಹೆಚ್ಚಳ ಮಾಡಲಾಗಿದೆ.
ಬ್ರ್ಯಾಂಡ್ ಆಧಾರದ ಮೇಲೆ ದರ ಹೆಚ್ಚಳ?
ಶೇ. 17ರಿಂದ ಶೇ. 25ರವರೆಗೂ ಮದ್ಯದ ಬೆಲೆಯನ್ನು ಬ್ರ್ಯಾಂಡ್‍ಗಳ ಆಧಾರದ ಮೇಲೆ ಹೆಚ್ಚಿಸಲಾಗಿದೆ. ಹೈಬ್ರ್ಯಾಂಡ್‍ಗಳಿಗೆ ಶೇ.25ರವರೆಗೆ ಸುಂಕ ವಿಧಿಸಲಾಗಿದೆ. ಮಿಡಲ್ ಮದ್ಯಗಳಿಗೆ ಶೇ. 21ರಷ್ಟು ಸುಂಕ ವಿಧಿಸಲಾಗಿದ್ದು, ಚೀಪ್ ಲಿಕ್ಕರ್‌ಗಳಿಗೆ ಶೇ. 17ರಷ್ಟು ಅಬಕಾರಿ ಸುಂಕ ಏರಲಾಗಿದೆ. ಆದರೆ ಬೀರ್, ಫೆನಿ, ವೈನ್, ನೀರಾ ಮೇಲೆ ಶುಲ್ಕ ವಿಧಿಸಲಾಗಿಲ್ಲ. ಗೆಜೆಟ್‍ನಲ್ಲಿ ಅಧಿಕೃತವಾಗಿ ಪ್ರಕಟಿಸಿ ಆದೇಶ ಹೊರಡಿಸಲಾಗಿದೆ. ಇಂದಿನಿಂದಲೇ ಮದ್ಯದ ಹೊಸ ದರ ಜಾರಿಗೆ ಬರಲಿದೆ.
ಅಬಕಾರಿ ಇಲಾಖೆಯಿಂದ ಬೊಕಸಕ್ಕೆ 2,530 ಕೋಟಿ ರೂ ಆದಾಯ ನಿರೀಕ್ಷೆ
ಇನ್ನು ಮದ್ಯದ ಮೇಲಿನ ಸಂಕು ಹೆಚ್ಚಳದ ಮೂಲಕ ರಾಜ್ಯ ಸರ್ಕಾರ ಅಬಕಾರಿ ಇಲಾಖೆ ಮೂಲದ ಸುಮಾರು 2,530 ಕೋಟಿ ರೂ ಆದಾಯ ನಿರೀಕ್ಷೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಬಕಾರಿ ಇಲಾಖೆ ಆಯುಕ್ತ ಯಶವಂತ ವಿ ಅವರು, ಮದ್ಯದ ಮೇಲಿನ ಸುಂಕ ಹೆಚ್ಚಳ ಮೂಲಕ ಇಲಾಖೆಯ ಬೊಕ್ಕಸಕ್ಕೆ 2,530 ಆದಾಯ ಬರುವ ನಿರೀಕ್ಷೆ ಇದೆ. ಆ ಮೂಲಕ ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ 1,610 ಕೋಟಿ ರೂ ಗಳ ಕೊರೋನಾ ನಿರ್ವಹಣಾ ಪ್ಯಾಕೇಜ್ ಗೆ ನಿಧಿ ಸಂಗ್ರಹವಾಗುವ ನಿರೀಕ್ಷೆ ಇದೆ. ಪ್ರಸ್ತುತ ಸುಂಕ ಏರಿಕೆ ದೇಶೀಯ ಪಾನೀಯಗಳಿಗೂ ಅನ್ವಯವಾಗಲಿದೆ. 599 ರೂಗಳೊಳಗಿನ ಮದ್ಯಕ್ಕೆ ಶೇ.17ರಷ್ಟು, 600ರಿಂದ 1199 ರೂಗಳೊಳಗಿನ ಮದ್ಯದ ಮೇಲೆ ಶೇ.21ರಷ್ಟು ಮತ್ತು 1200ರಿಂದ 15 ಸಾವಿರ ರೂ ಮತ್ತು ಅದಕ್ಕೂ ಹೆಚ್ಚಿನ ಮದ್ಯಕ್ಕೆ ಶೇ.25ರಷ್ಟು ಸುಂಕ ವಿಧಿಸಲಾಗಿದೆ ಎಂದು ಹೇಳಿದರು.
2020-2021ರ ವಿತ್ತೀಯ ವರ್ಷದಲ್ಲಿ 22,700 ಕೋಟಿ ರೂ ಆದಾಯದ ಗುರಿ
ಇನ್ನು ಈ ಹಿಂದೆ ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಅಬಕಾರಿ ಸುಂಕದಲ್ಲಿ ಶೇ.6ರಷ್ಟು ಏರಿಕೆ ಮಾಡಿತ್ತು. ಅಲ್ಲದೆ ಕೊರೋನಾ ಸಾಂಕ್ರಾಮಿಕ ಈ ಸಂದರ್ಭದಲ್ಲಿ ಮತ್ತೆ ಸೆಸ್ ಹೆಚ್ಚಳ ಮಾಡಲಾಗಿದ್ದು, ಆ ಮೂಲಕ ಹಾಲಿ 2020-2021ರ ವಿತ್ತೀಯ ವರ್ಷದಲ್ಲಿ 22,700 ಕೋಟಿ ರೂ ಅಬಕಾರಿ ಇಲಾಖೆ ಆದಾಯದ ಗುರಿ ಹೊಂದಲಾಗಿದೆ.
ಮೂರು ದಿನಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 473 ಕೋಟಿ ರೂ?
ಲಾಕ್ ಡೌನ್ ಬಳಿಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕಳೆದ ಮೂರು ದಿನಗಳಿಂದ ಒಟ್ಟಾರೆ 473 ಕೋಟಿ ರೂ ಆದಾಯ ಬಂದಿದೆ ಎಂದು ಹೇಳಲಾಗಿದೆ. ವೈನ್‍ಶಾಪ್ ಓಪನ್ ಮಾಡಿದ ಮೊದಲನೇ ದಿನ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಎರಡನೇ ದಿನ 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಮೂರನೇ ದಿನ ಅಂದರೆ ನಿನ್ನೆ ಬರೋಬ್ಬರಿ 231 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ರಾಜ್ಯದಲ್ಲಿ ಮೂರನೇ ದಿನವು ಭರ್ಜರಿ ಮದ್ಯ ಮಾರಾಟವಾಗಿದೆ. ಬಾರ್ ಓಪನ್ ಆಗಿ ಮೂರನೇ ದಿನವಾದ ಬುಧವಾರ ಬರೋಬ್ಬರಿ 231 ಕೋಟಿಯ ವ್ಯಾಪಾರ ನಡೆಸಿದೆ ಕೆಎಸ್‍ಬಿಸಿಎಲ್. ಬಾರ್‌ಗಳು ಮೊನ್ನೆಯ ದಾಖಲೆ ಮುರಿದು ಮದ್ಯ ಖರೀದಿ ಮಾಡಿವೆ. ನಿನ್ನೆ ಒಂದೇ ದಿನ 195 ಕೋಟಿಯಷ್ಟು ಮದ್ಯ ಖರೀದಿ ಮಾಡಲಾಗಿತ್ತು. 7 ಲಕ್ಷ ಲೀಟರ್ ಬಿಯರ್ ಮಾರಾಟವಾಗಿ 15.6 ಕೋಟಿ ರೂಪಾಯಿ ಬಂದಿದರೆ, 39 ಲಕ್ಷ ಲೀಟರ್ ಐಎಮ್‍ಎಲ್ ಲಿಕ್ಕರ್ ಸೇಲ್ ಆಗಿ 231 ಕೋಟಿ ರೂಪಾಯಿ ಬಂದಿದೆ.