ಮಣಿಪಾಲ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎ ಜಿ ಕೊಡ್ಗಿ ಎಂದೇ ಖ್ಯಾತರಾಗಿದ್ದ ಮಾಜಿ ಶಾಸಕ, ಹಿರಿಯ ರಾಜಕಾರಣಿ ಅಮಾಸೆಬೈಲ್ ಗೋಪಾಲಕೃಷ್ಣ ಕೊಡ್ಗಿ ಅವರು ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಎ ಜಿ ಕೊಡ್ಗಿ, ಕೃಷಿಕ ಹಾಗೂ ಸಹಕಾರಿ ಮುಖಂಡರಾಗಿದ್ದರು. ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಮತ್ತು ಮೂರನೇ ಹಣಕಾಸು ಆಯೋಗದ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷರಾಗಿದ್ದರು. ಅವರು ಕರ್ನಾಟಕ ಬಿಜೆಪಿ ಉಪಾಧ್ಯಕ್ಷರೂ ಆಗಿದ್ದರು.
ಕಾಂಗ್ರೆಸ್ ನಲ್ಲಿ ರಾಜಕೀಯ ಜೀವನ ಆರಂಭಿಸಿದ ಕೊಡ್ಗಿ ಅವರು 1972 ಹಾಗೂ 1978ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಬಿಜೆಪಿ ಸೇರಿ 1995ರಿಂದ 1999ರವರೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಎ ಜಿ ಕೊಡ್ಗಿ ಅವರು ಕ್ಯಾಂಪ್ಕೋ ಅಧ್ಯಕ್ಷ ಎ ಕಿಶೋರ್ ಕುಮಾರ್ ಕೊಡ್ಗಿ ಮತ್ತು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಸೇರಿದಂತೆ ಆರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಎ ಜಿ ಕೊಡ್ಗಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.
Follow us on Social media