ಗದಗ: ಕೊರೋನಾ ಲಾಕ್ ಡೌನ್ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ಹಾಗಾಗಿ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಚಂದನ ವಾಹಿನಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ.
ಆದರೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಮಹಿಳೆಯೊಬ್ಬರು ಚಿನ್ನದ ತಾಳಿಯನ್ನು ಅಡವಿಟ್ಟು ಟಿವಿ ಖರೀದಿಸಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ರೆಡ್ಡೇರ ನಾಗನೂರ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕಸ್ತೂರಿ ಛಲವಾದಿ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ಹೊತ್ತಿದ್ದಾರೆ.
ಅವರ ಇಬ್ಬರು ಮಕ್ಕಳು 7 ಮತ್ತು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಮಕ್ಕಳಿಗೆ ಅನುಕೂಲವಾಗುವಂತೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳನ್ನು ಕೇಳಲು ಟಿವಿ ಖರೀದಿಸಿದ್ದಾರೆ. ಇವರ ಮನೆಯಲ್ಲಿ ಟಿವಿ ಇಲ್ಲದ ಕಾರಣ ಮಕ್ಕಳ ಕಲಿಕೆಗೆ ತೊಂದರೆಯಾಗಿತ್ತು. ಶಿಕ್ಷಕರು ಕರೆಮಾಡಿ ಟಿವಿ ನೋಡುವಂತೆ ತಿಳಿಸುತ್ತಿದ್ದರು. ಪಾಠಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದರೆ ಟಿವಿ ಇಲ್ಲದ ಕಾರಣ ಮಕ್ಕಳಿಗೆ ಕಲಿಯಲು ಸಾಧ್ಯವಾಗಿರಲಿಲ್ಲ. ಇದರಿಂದ ಕಸ್ತೂರಿ ತಾಳಿ ಮಾರಿ ಮಕ್ಕಳ ಅನುಕೂಲಕ್ಕಾಗಿ ಟಿವಿ ತಂದಿದ್ದಾರೆ.
20 ಸಾವಿರ ರೂಪಾಯಿಗೆ ಮಂಗಳ ಸೂತ್ರ ಮಾರಿ 14 ಸಾವಿರ ರು ಬೆಲೆಯ ಟಿವಿ ಖರೀದಿಸಿದ್ದಾರೆ. ಲಾಕ್ ಡೌನ್ ನಂತರವೂ ನಮಗೆ ಸರಿಯಾಗಿ ಕೂಲಿ ಕೆಲಸ ಸಿಗುತ್ತಿಲ್ಲ, ಹೀಗಾಗಿ ಉಳಿತಾಯ ಮಾಡಿದ್ದ ಹಣದಲ್ಲಿ ದೈನಂದಿನ ಜೀವನ ನಡೆಯುತ್ತಿದೆ. ಆದರೆ ಮಕ್ಕಳ ಶಾಲಾ ಭವಿಷ್ಯವೂ ಮುಖ್ಯವಾಗಿರುವ ಕಾರಣ ನನ್ನ ಮಂಗಳ ಸೂತ್ರ ಮಾರಿದ್ದಾಗಿ ತಿಳಿಸಿದ್ದಾರೆ.
ನನ್ನ ಮಕ್ಕಳನ್ನು ಉತ್ತಮ ಅಧಿಕಾರಿಳನ್ನಾಗಿ ಮಾಡುವ ಆಸೆಯಿದೆ. ಟಿವಿಯಲ್ಲಿ ಅವರು ಪಾಠಗಳನ್ನು ಕಲಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Follow us on Social media