ಮಂಗಳೂರು: ಬಿಜೆಪಿ ಈಗ ಭಾರತೀಯ ಜನತಾ ಪಕ್ಷವಾಗಿ ಉಳಿದಿಲ್ಲ, ಬದಲಿಗೆ ಬ್ಯುಸಿನೆಸ್ ಜನತಾ ಪಕ್ಷವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಕಾಂಗ್ರೆಸ್‌ನ ದ.ಕ. ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬ್ರಿಟಿಷರು ವ್ಯವಹಾರದ ಕಾರಣಕ್ಕಾಾಗಿ ಭಾರತಕ್ಕೆ ಬಂದವರು. ಈಗ ಬಿಜೆಪಿ ಕೂಡ ಅದೇ ಹಾದಿಯಲ್ಲಿದೆ.
ಪ್ರಜಾಪ್ರಭುತ್ವ ರೀತಿಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವನ್ನೇ ತೆಗೆಯುವ ಕಾರ್ಯಕ್ಕೆ ಕೈಹಾಕುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ತಮಗಾಗದವರ ವಿರುದ್ಧ ಐಟಿ, ಇಡಿ ದಾಳಿಯ ಅಸ್ತ್ರ ಬಳಕೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ಬದಲಿಸುವ ಅನಿವಾರ್ಯತೆ ಬಂದೊದಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರವಿದ್ದಾಗ ನಾರಾಯಣ ಗುರು ಜಯಂತಿ ಘೋಷಣೆ ಮಾಡಿ ಗೌರವ ನೀಡಿದ್ದರೆ ಇದೀಗ ಬಿಜೆಪಿ ಸರ್ಕಾರ ಪದೇ ಪದೇ ಗುರುಗಳಿಗೆ ಅವಮಾನ ಮಾಡುತ್ತಿದೆ.
ಬಿಜೆಪಿಯವರು ಶೇ.20ರಷ್ಟಿರುವ ಮುಸ್ಲಿಮರ ಆಝಾನ್ ಮೈಕ್ ನಿಲ್ಲಿಸಲು ಹೋಗಿ ಶೇ.80ರಷ್ಟಿರುವ ಹಿಂದೂಗಳಿಗೆ ಮೋಸ ಮಾಡಿದ್ದಾರೆ. ಹಿಂದೂಗಳ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೂ ಮೈಕ್ ಅಳವಡಿಸಲು ಬಿಡುತ್ತಿಲ್ಲ ಎಂದು ಹೇಳಿದರು.ತಾನು ದ.ಕ. ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದು, ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ತಳಮಟ್ಟದಲ್ಲಿ ಕಾಂಗ್ರೆಸ್ ನೆಟ್ವರ್ಕ್ ಸದೃಢವಾಗಿದೆ. ಅನೇಕ ಸರಳ ವಿಚಾರಗಳ ಮೂಲಕ ಜನರ ಮನವೊಲಿಸುವ ಕಾರ್ಯ ಮಾಡಲಿದ್ದೇವೆ. ಕರಾವಳಿಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಜೆ.ಆರ್. ಲೋಬೊ, ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ಟಿ.ಕೆ. ಸುಧೀರ್, ಶುಭೋದಯ ಆಳ್ವ ಮತ್ತಿತರರಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಪ್ರಯುಕ್ತ ಆಯೋಜಿಸಲಾಗುತ್ತಿರುವ ‘ಸಿದ್ದರಾಮೋತ್ಸವ’ಕ್ಕೆ ಯಾವುದೇ ಅಪಸ್ವರ ಇಲ್ಲ. ಕಾಂಗ್ರೆಸ್‌ನ ಸಂಘಟನೆ ಹಿತದೃಷ್ಟಿಯಿಂದ ಇದನ್ನು ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ಉತ್ಸವ ಮಾಡಿದರೆ ಅದು ಉತ್ತಮ ಬೆಳವಣಿಗೆ ಎಂದು ಮಧು ಬಂಗಾರಪ್ಪ ಹೇಳಿದರು.