ಮಂಗಳೂರು : ಹೊಸ ಮಾದರಿಯ ಹಿಟಾಚಿ ಯಂತ್ರ ಮಾರಾಟದ ಉದ್ದೇಶದಿಂದ ಮುಂಗಡ 10ಲಕ್ಷ ರೂ ಪಡೆದು ಗುತ್ತಿಗೆದಾರರೊಬ್ಬರಿಗೆ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ನಗರದ ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಯೋಧಮಾಲ್ ರಾಡಿಘಾಂವ್ ನಿವಾಸಿ ಅಮೋಲ್ ಸರ್ಜೆರಾವ್ ಉರ್ಕುಡೆ (23) ಬಂಧಿತ ಆರೋಪಿ.
ಪ್ರಕರಣದ ವಿವರ: ಎಂ ಕುಮಾರೇಶ್ ಅವರು ತನ್ನ ಕೆಲಸಗಾರ ಕಿಶೋರ್ ಕುಮಾರ್ ಎಂಬಾತನ ಮುಖಾಂತರ ಮಹಾರಾಷ್ಟ್ರದ ಅಮರಾವತಿ ಎಂಬಲ್ಲಿನ ಆರೋಪಿ ಅಮೋಲ್ ಸರ್ಜೆರಾವ್ ಉರ್ಕುಡೆ ಎಂಬಾತನ ಬಳಿ ಇರುವ ಹಿಟಾಚಿ ಮಾಹಿತಿ ಪಡೆದು ಅದನ್ನು ಖರೀದಿಸಲು ನಿರ್ಧರಿಸಿದ್ದರು.
ಈತನ ಜೊತೆ ಮೊಬೈಲ್ ಮೂಲಕ ಮಾತುಕತೆ ನಡೆಸಿದ್ದರು. 13ಲಕ್ಷ ರೂ.ಗೆ ಖರೀದಿಗೆ ಒಪ್ಪಿಗೆಯಾಗಿದ್ದು 10ಲಕ್ಷ ರೂ. ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.
ಹಿಟಾಚಿ ತರಲು ಕಿಶೋರ್ ಕುಮಾರ್‌ನನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರು. ಆದರೆ ಅಲ್ಲಿ ಹೋಗಿ ಆರೋಪಿಗೆ ಕರೆ ಮಾಡಿದಾಗ ಆತನ ಫೋನ್ ಸ್ವಿಚ್ಡ್ ಆಫ್ ಆಗಿತ್ತು.
ಆರೋಪಿ ಹಣ ಪಡೆದು ಹಿಟಾಚಿ ಯಂತ್ರ ನೀಡದೆ ಹಾಗೂ ಹಣವನ್ನು ವಾಪಸ್ ಕೊಡದೆ ನಂಬಿಕೆ ದ್ರೋಹ ಮತ್ತು ಮೋಸ ಉಂಟುಮಾಡಿರುವುದಾಗಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಹಾರಾಷ್ಟ್ರಕ್ಕೆ ಪೊಲೀಸ್ ತಂಡ: ಪ್ರಕರಣವನ್ನು ದಾಖಲಿಸಿಕೊಂಡ ನಂತರ ಬಂದರು ಪೊಲೀಸ್ ತಂಡವೊಂದು ಇನ್ಸ್‌ಪೆಕ್ಟರ್ ಇನ್ಸ್‌ಪೆಕ್ಟರ್ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನಿನ್ನೆ ಆರೋಪಿಯನ್ನು ಮಂಗಳೂರಿಗೆ ಕರೆತರಲಾಗಿದೆ.
Follow us on Social media