ಮಂಗಳೂರು : ನಗರದ ಹಂಪನಕಟ್ಟೆ ಬಳಿ ಬೈಕ್‌ಗೆ ಖಾಸಗಿ ಬಸ್ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಾಲಕ ಬಿಜು ಮೋನು ಬಂಧಿಸಲ್ಪಟ್ಟವರು. ಬಸ್ ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಚಾಲಕನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎ. 26ರವರೆಗೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸುರತ್ಕಲ್ ಜನತಾ ಕಾಲನಿಯಿಂದ ರೂಟ್ ನಂಬರ್ 45 ಜಿ ಸಂಖ್ಯೆಯ ಖಾಸಗಿ ಬಸ್‌ನ್ನು ಬಿಜು ಚಲಾಯಿಸಿಕೊಂಡು ಬರುತ್ತಿದ್ದರು. ಹಂಪನಕಟ್ಟೆ ಬಳಿ ಬರುವಾಗ ಬಳ್ಳಾಲ್‌ಬಾಗ್ ನಿವಾಸಿ ಡೇಲನ್ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ಗೆ ಬಸ್ ಢಿಕ್ಕಿಯಾಗಿ ಬಸ್ ಮತ್ತು ಬೈಕ್ ಎರಡೂ ಬೆಂಕಿಗೆ ಆಹುತಿಯಾಗಿದ್ದವು. ಬೈಕ್ ಸವಾರ ಡೇಲನ್ ಅವರ ಕಾಲಿಗೆ ಅಪಘಾತದಲ್ಲಿ ಗಂಭೀರ ಗಾಯವಾಗಿತ್ತು. ಎ. 8ರಂದು ಘಟನೆ ಸಂಭವಿಸಿತ್ತು.
Follow us on Social media