Breaking News

ಮಂಗಳೂರು : ಸಿಎನ್‍ಜಿ ಬೆಲೆ ಇಳಿಕೆಗೆ ಕೋರಿ ಮನವಿ: ಡಿಸಿ ಡಾ. ರಾಜೇಂದ್ರ ಕೆ.ವಿ.

ಮಂಗಳೂರು : ಪರಿಸರ ಸ್ನೇಹಿ ಇಂಧನ ಸಿಎನ್‍ಜಿಯ ಬೆಲೆಯನ್ನು ಆದಷ್ಟು ಇಳಿಕೆ ಮಾಡುವಂತೆ ಕೋರಿ ದಕ್ಷಿಣ ಕನ್ನಡದ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಯವರ ಕಚೇರಿಯಿಂದ ಪತ್ರ ಮುಖೇನ ಸಂಬಂಧಿಸಿದ ಕಾರ್ಪೋರೇಟ್ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು.

ಅವರು ಜೂ.27ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿಎನ್‍ಜಿ ಇಂಧನ ದರ ಪರಿಷ್ಕರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸಿಎನ್‍ಜಿ ಇಂಧನದ ಬೆಲೆ ಹೆಚ್ಚಳವಾಗಿದ್ದು, ದರವನ್ನು ಕಡಿಮೆ ಮಾಡುವಂತೆ ಸಿಎನ್‍ಜಿ ಗ್ಯಾಸ್ ಬಳಕೆದಾರರು ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಸಿಎನ್‍ಜಿ ಇಂಧನದ ಬೆಲೆ ಪರಿಷ್ಕರಣೆ ಸಂಬಂಧಿಸಿದ ಕಾರ್ಪೋರೇಟ್ ಕಚೇರಿ ವ್ಯಾಪ್ತಿಗೆ ಒಳಪಡುತ್ತದೆ, ಆದಕಾರಣ ಜಿಲ್ಲೆಯ ಸಂಸದರು ಹಾಗೂ ಜಿಲ್ಲಾಧಿಕಾರಿಯವರ ಕಚೇರಿಯಿಂದ ಕೂಡಲೇ ಪತ್ರ ಬರೆದು ದರವನ್ನು ಪರಿಷ್ಕರಿಸುವಂತೆ ಕೋರಲಾಗುವುದು, ಗೇಲ್ ಇಂಡಿಯಾ ವ್ಯಾಪ್ತಿಗೆ ಅದು ಬರುವುದಿಲ್ಲ ಎಂದು ಹೇಳಿದರು.

ಜಿಲ್ಲೆಯ ಸಿಎನ್‍ಜಿ ಬಂಕ್‍ಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸಂಸದರ ಅಧ್ಯಕ್ಷತೆಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ಗಳ ಡಿಜಿಎಂಗಳೊಂದಿಗೆ ಸಭೆ ನಡೆಸಲಾಗುವುದು, ಆಟೋ, ಕಾರು, ಟ್ರಕ್ ಹಾಗೂ ಬಸ್ ಸೇರಿದಂತೆ ಹಲವು ಸಿಎನ್‍ಜಿ ವಾಹನಗಳಿಗೆ ಗ್ರಾಹಕರು ಹೆಚ್ಚಾದ ಕಾರಣ ಅವರ ಅನುಕೂಲಕ್ಕಾಗಿ ಬೆಳಿಗ್ಗೆ 6 ರಿಂದ 10ರ ವರೆಗೆ ಕಡ್ಡಾಯವಾಗಿ ಬಂಕ್‍ಗಳನ್ನು ತೆರೆದು, ಹಸಿರು ಇಂಧನವನ್ನು ಪೂರೈಸುವಂತೆ ತಾಕೀತು ಮಾಡಿದ ಅವರು ಅದನ್ನು ಉಲ್ಲಂಘಿಸಿದ್ದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೇಲ್ ಇಂಡಿಯಾದಿಂದ ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ 100 ಸಿಎನ್‍ಜಿ ಇಂಧನ ಕೇಂದ್ರಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಸಿಎನ್‍ಜಿಯ ಮದರ್ ಸ್ಟೇಷನ್‍ನಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದು, ಇದೀಗ 10 ಸಿಎನ್‍ಜಿ ಇಂಧನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ದಿನಗಳಿಲ್ಲಿ ನೂತನವಾಗಿ ಮೂರು ಕೇಂದ್ರಗಳು ಆರಂಭವಾಗಲಿವೆ ಎಂದರು.

ಗೇಲ್ ಇಂಡಿಯಾದ ಜನರಲ್ ಮ್ಯಾನೇಜರ್ ಯು.ಸಿ. ಸಿಂಗ್, ಡಿ.ಜಿಎಂ. ಪಿ.ಜಿ. ಜಾಯ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್ ಮಂಜೇಶ್ ವರ್ಣೇಕರ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಆಯಿಲ್ ಕಾರ್ಪೋರೇಷನ್ ಕಂಪನಿಗಳ ಹಿರಿಯ ಅಧಿಕಾರಿಗಳು, ಮಂಗಳೂರು ನಾಗರೀಕ ಸಮಿತಿ ಅಧ್ಯಕ್ಷ ಸುಭಾಷ್‍ಚಂದ್ರ ಶೆಟ್ಟಿ, ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಜಿಲ್ಲಾ ಸಿಎನ್‍ಜಿ ಬಳಕೆದಾರರ ಸಂಘದ ಸಂಚಾಲಕ ಶ್ರೀನಾಥ್ ಸೇರಿದಂತೆ ಸಂಬಂಧಿಸಿದವರು ಸಭೆಯಲ್ಲಿದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×