ಮಂಗಳೂರು: ಎಂಜಿನ್ ಸಮಸ್ಯೆಯಿಂದಾಗಿ ಸಮುದ್ರದಲ್ಲಿ ಬೋಟ್ ವೊಂದು ಸಿಲುಕಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿಗೊಂಡಿದ್ದ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.
ಕಣ್ಣೂರಿನಿಂದ 10 ನಾಟಿಕಲ್ ಮೈಲಿ ದೂರದಲ್ಲಿ ದೋಣಿ ಕೆಟ್ಟು ನಿಂತಿತ್ತು. ಈ ಕುರಿತು ಕರಾವಳಿ ಕಾವಲು ಪಡೆ ಸಿಬ್ಬಂದಿ ಮಾಹಿತಿ ಪಡೆದು, ವಿಕ್ರಮ್ ಹಡಗಿನೊಂದಿಗೆ ಕಾರ್ಯಾಚರಣೆ ನಡೆಸಿ, ಮೂವರನ್ನು ರಕ್ಷಿಸಿದ್ದಾರೆಂದು ತಿಳಿದುಬಂದಿದೆ. ಬಳಿಕ ರಕ್ಷಣೆಗೊಳಗಾದ ಮೀನುಗಾರರಿಗೆ ಆಹಾರ, ವೈದ್ಯಕೀಯ ನೆರವು ನೀಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ತೌಕ್ತೆ’ ಚಂಡಮಾರುತದ ಪರಿಣಾಮದಿಂದ ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಬಿರುಸಿನ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನತೆ ತೊಂದರೆ ಅನುಭವಿಸುವಂತಾಗಿದೆ.
ವಾರಾಂತ್ಯ ಕರ್ಪ್ಯೂ ತೆರವುಗೊಳಿಸಿದ್ದರಿಂದ ಕಾರ್ಮಿಕರು ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದರೂ ಮಳೆಯಿಂದಾಗಿ ಹೊರಗೆ ಹೋಗದಂತಾಗಿದೆ. ಅಗತ್ಯ ವಸ್ತುಗಳ ಖರೀದಿಸಲಾಗದೆ ಜನರು ತತ್ತರಿಸಿದರು. ಜಿಲ್ಲೆಯ ನಗರ ಮತ್ತು ಗ್ರಾಮಾಂತರದಲ್ಲಿ ಭಾರಿ ಮಳೆಯಾಗಿದ್ದು, ಉಳ್ಳಾಲ ಸೇರಿದಂತೆ ಹಲವೆಡೆ ಕಡಲು ಪ್ರಕ್ಷುಬ್ಧವಾಗಿದೆ. ಅಲೆಗಳ ಆರ್ಭಟ ಹೆಚ್ಚಾಗಿದ್ದು, ಸಮುದ್ರ ತೀರದ ಜನರು ಆತಂಕ ಎದುರಿಸುವಂತಾಗಿದೆ.
Follow us on Social media