ಮಂಗಳೂರು: ರಾಜಕೀಯ ಪ್ರೇರಿತ ಸೇಡು ಮತ್ತು ದ್ವೇಷದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು
ಆರೋಪಿಸಿ ಕೇಂದ್ರ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಿತು.
ಫಳ್ನೀರ್ನ ಎಸ್.ಎಲ್ ಮಥಾಯಿಸ್ ಪಾರ್ಕ್ ನಿಂದ ಅತ್ತಾವರದ ಐ.ಟಿ ಕಚೇರಿವರೆಗೆ
ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ರಸ್ತೆ ಮಧ್ಯದಲ್ಲೇ ಪೊಲೀಸರು ತಡೆದರು. ಈ ಸಂದರ್ಭ ಪೊಲೀಸರು ಐಟಿ ಕಚೇರಿಗೆ ಬಿಗಿ ಭದ್ರತೆ ಏರ್ಪಡಿಸಿದ್ದರು.
ಈ ಸಂದರ್ಭ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಾಥ್ ರೈ, ಐವಾನ್ ಡಿ ಸೋಜಾ ಭಾಗಿಯಾಗಿದ್ದರು.
ಐಟಿ ಕಚೇರಿಯತ್ತ ನುಗ್ಗಲು ಯತ್ನಿಸಿದ ಕಾಂಗ್ರೇಸ್ನ ಹಲವು ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯಲಾಯಿತು.
ಈ ಸಂದರ್ಭ ಮಾತನಾಡಿದ ರಮಾನಾಥ ರೈ ಅವರು, ನೇಶನಲ್ ಹೆರಾಲ್ಡ್ ಪತ್ರಿಕೆ ಪುನಶ್ಚೇತನ ಮಾಡಲು ಕಾಂಗ್ರೆಸ್ ಮುಂದಾದಾಗ ಅಲ್ಲಿ ಹಣದ ವ್ಯವಹಾರ ನಡೆದಿದೆ ಎಂದು ಆರೋಪಿಸಿರುವುದು ದುರುದ್ದೇಶಪೂರಿತವಾಗಿದೆ.
ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯ ಪ್ರೇರಿತವಾಗಿ ತನಿಖೆ ನಡೆಸುವುದು ಅನ್ಯಾಯವಾಗಿದೆ. ನಮ್ಮ ಪ್ರತಿಭಟನೆ ನಿರಂತರ ಮುಂದುವರಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಯುಟಿ ಖಾದರ್, ಶಕುಂತಾಳ ಶೆಟ್ಟಿ, ಎಂಎಲ್‌ಸಿ ಮಂಜುನಾಥ ಭಂಡಾರಿ,
ಮಾಜಿ ಶಾಸಕ ಜೆ ಆರ್ ಲೋಬೋ, ಐವನ್ ಡಿ ಸೋಜಾ, ಯುವ ನಾಯಕ ಲುಕ್ಮಾನ್, ಸುಹಾನ್ ಆಳ್ವಾ, ಪ್ರತಿಭಾ ಕುಳಾಯಿ, ಕವಿತಾ ಸನಿಲ್, ಶಾಲೆಟ್ ಪಿಂಟೋ, ಶಶಿಧರ ಹೆಗ್ಡೆ ಮೊದಲಾದವರಿದ್ದರು.
ಪೊಲೀಸರೊಂದಿಗೆ ಘರ್ಷಣೆಗಿಳಿದ ಕೈ ಕಾರ್ಯಕರ್ತರು
ಕಾಂಗ್ರೆಸ್ ಕಾರ್ಯಕರ್ತರು ಐಟಿ ಕಚೇರಿ ತಲುಪುತ್ತಿದ್ದಂತೆ ಬ್ಯಾರಿಕೇಡ್ ಮೂಲಕ ಅಡ್ಡಗಟ್ಟಲು ಯತ್ನಿಸಿದರು. ಈ ವೇಳೆ ಪೊಲೀಸ್ ಮತ್ತು ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ಕಾರಣವಾಯಿತು. ಜೊತೆಗೆ ಕೆಲವರು ಪೊಲೀಸರ ಖಾಕಿ ಹಿಡಿದೆಳೆದು ಆಕ್ರೋಶ ವ್ಯಕ್ತಪಡಿಸಿದರು.