ಮಂಗಳೂರು : ಯುವಕನೋರ್ವ ನಗರದ ಅಶೋಕನಗರ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿದ ಘಟನೆ ಮಠದಕಣಿ ಬಳಿ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ಮಠದಕಣಿ ನಿವಾಸಿ ಮನೀಶ್ (21) ಎನ್ನಲಾಗಿದ್ದು, ಹಲ್ಲೆಗೊಳಗಾದವರನ್ನು ಕೋಟೆಕಾರ್ ನಿವಾಸಿ, ಪೋಸ್ಟ್ ಮ್ಯಾನ್ ದಿನೇಶ್ (49) ಎನ್ನಲಾಗಿದೆ.
ಕಳೆದ ಹಲವು ವರ್ಷಗಳಿಂದ ದಿನೇಶ್ ಅವರು ಅಶೋಕನಗರದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಪ್ರತಿನಿತ್ಯದಂತೆ ಕಚೇರಿಯಿಂದ ಕಾಗದ ಬಟವಾಡೆ ಮಾಡಲು ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಮಠದಕಣಿ ನಿವಾಸಿ ಮನೀಶ್‌ಗೆ ರಿಜಿಸ್ಟರ್ ಕಾಗದ ಬಂದಿದ್ದು, ಅದನ್ನು ಕೊಡಲು ದಿನೇಶ್ ಅವರು ಹೋದ ಸಂದರ್ಭ, ದಿನೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೇ, ಏಕಾಏಕಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಅಲ್ಲಿಂದ ಪೋಸ್ಟ್ ಮ್ಯಾನ್ ತಪ್ಪಿಸಿಕೊಂಡಿದ್ದಾರೆ. ಆದರೆ, ಆ ವೇಳೆ ಆರೋಪಿ ಬೈಕ್‌ಅನ್ನು ಪುಡಿಗಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media