ಮಂಗಳೂರು : ಮಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬೋಳೂರು ನಿವಾಸಿ , 58 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇವರು ಕಳೆದ ಕೆಲವು ದಿನಗಳ ಹಿಂದೆ ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ರೋಗಿ ಸಂಖ್ಯೆ 501 ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮಹಿಳೆಯಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರ ಗಂಟಲ ಸ್ರಾವವನ್ನು ಪರೀಕ್ಷೆಗಾಗಿ ಕಳುಹಿಸಿತ್ತು. ಕೊರೊನಾ ದೃಢವಾದ ಹಿನ್ನಲೆಯಲ್ಲಿ ಇದೀಗ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಪರ್ಕಕ್ಕೆ ಬಂದಿದ್ದ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಬೋಳೂರು ಪರಿಸರದಲ್ಲಿ ಕೊರೊನಾ ಸೋಂಕು ದೃಡವಾದ ಹಿನ್ನಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಬುಧವಾರ ಸಂಜೆಯಿಂದ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿದ್ದಾರೆ.
ಕಳೆದೆರಡು ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳಿಲ್ಲದೇ ಕೊಂಚ ನಿರಾಳವಾಗಿದ್ದ ಜಿಲ್ಲೆಯಲ್ಲಿ ಮತ್ತೆ ಕಂಡು ಬಂದ ಪಾಸಿಟಿವ್ ಪ್ರಕರಣ ಆತಂಕ ಹೆಚ್ಚಿಸುವಂತೆ ಮಾಡಿದೆ.
Follow us on Social media