ಬಂಟ್ವಾಳ : ಅವಿವಾಹಿತ ಅಣ್ಣ- ತಂಗಿ ಇಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಗೈದ ಹೃದಯ ವಿದ್ರಾವಕ ಘಟನೆ ಜೂ.೧೫ ರ ಸೋಮವಾರ ತಡರಾತ್ರಿ ಬಂಟ್ವಾಳದ ಸಂಗಬೆಟ್ಟು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆಗೈದವರನ್ನು ನೀಲಯ್ಯ ಶೆಟ್ಟಿ ಗಾರ್ (42) , ಕೇಸರಿ ( 39) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಇವರು ಅನಾರೋಗ್ಯ ದಿಂದ ಬಳಲುತ್ತಿದ್ದು, ರಾತ್ರಿ ಸುಮಾರು 11 ಗಂಟೆಯ ಬಳಿಕ ತಮ್ಮ ಮನೆಯ ಕೊಠಡಿಯಲ್ಲಿ ಕೃತ್ಯ ಗೈದಿದ್ದಾರೆ ಎಂದು ತಿಳಿದುಬಂದಿದೆ.ಮನೆಯಲ್ಲಿ ನೀಲಯ್ಯ ಅವರ ಮತ್ತೊಬ್ಬ ಸಹೋದರ ಮತ್ತು ಅವರ ಪತ್ನಿ, ಮಗ ವಾಸವಿದ್ದು, ಇವರೆಲ್ಲಾ ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ಇದ್ದಕ್ಕಿಂದಂತೆ ಕಿರುಚಿದ ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. . ಬಳಿಕ ಸ್ಥಳೀಯರು ಸೇರಿ ಗಂಭೀರ ಗಾಯಗೊಂಡ ಇಬ್ಬರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆ ಗೆ ಸಾಗಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.
ಪೆಟ್ರೋಲ್ ತಂದು ದಾಸ್ತಾನು ಇರಿಸಿ ತಡರಾತ್ರಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೀಲಯ್ಯ ಕೈ ಮಗ್ಗ ನಡೆಸುತ್ತಿದ್ದು, ಅನಾರೋಗ್ಯದ ಹಿನ್ನಲೆಯಲ್ಲಿ ಅದನ್ನು ನಿಲ್ಲಿಸಿದ್ದರು. ಇನ್ನು ಕೇಸರಿ 30 ವರ್ಷಗಳಿಂದ ಮಾನಸಿಕ ವಾಗಿ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗಿದೆ. ಕೆಲ ತಿಂಗಳ ಹಿಂದೆ ಇವರ ತಂದೆ ಹಾಗೂ ತಾಯಿ ಅನಾರೋಗ್ಯದಿಂದ ತೀರಿಕೊಂಡಿದ್ದರು.
ಮಾಹಿತಿ ತಿಳಿದ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ, ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
Follow us on Social media