ಮಂಗಳೂರು: ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಹಿಂದೂ ದೇವರ ಅವಹೇಳನ ನಡೆಸಿದ್ದಾರೆಂದು ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತ ಶರತ್ ಕುಲಾಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಲ್ಲೇನಿದೆ?
ನಾನು ಹಿಂದೂ ಧರ್ಮದ ಸಂಸ್ಕಾರದಲ್ಲಿ ಹುಟ್ಟಿದ್ದು ಹಿಂದೂ ಸಂಸ್ಕಾರದಲ್ಲಿ ನನ್ನ ಜೀವನವನ್ನು ನಡೆಸಿಕೊಂಡು ಬರುತ್ತಿದ್ದೇನೆ , ನಾನು ಶ್ರೀರಾಮ , ಶ್ರೀಕೃಷ್ಣ , ಈಶ್ವರ, ಚಂಡಿಚಾಮುಂಡಿ ದೇವತೆಗಳನ್ನು ಆರಾಧಿಸಿಕೊಂಡು ಬರುತ್ತಾ , ಹಿಂದೂ ಧರ್ಮ ಸಂಸ್ಕೃತಿ ಹಾಗು ಸಂಸ್ಕಾರಗಳನ್ನು ಕೊಡುತ್ತ ಹಾಗು ತಮ್ಮ ಜೀವನವನ್ನೇ ಹಿಂದೂಧರ್ಮಕ್ಕಾಗಿ ಮುಡಿಪಾಗಿಟ್ಟು ಈ ದೇಶವನ್ನು ಆಳಿದಂತ ಪ್ರಭು ಶ್ರೀರಾಮನ ಭಕ್ತನಾಗಿ ನಾನು ನನ್ನ ಜೀವನವನ್ನು ಸಾಗಿಸುತ್ತಾ ಶ್ರೀರಾಮನ ಅರಾಧಕವಾಗಿದ್ದೇನೆ.
ಇತ್ತೀಚಿನ ದಿನಗಳಲ್ಲಿ ನಾವು ಪವರ್ ಟಿವಿಯನ್ನು ವೀಕ್ಷಿಸುತ್ತಿದ್ದಾಗ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ನಿಪ್ಪಾಡಿ ಕ್ಷೇತ್ರದ ಶಾಸಕರಾಗಿರುವ ಮುರುಗೇಶ್ ನಿರಾಣಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅತ್ಯಂತ ಬೇಜವಾಬ್ದಾರಿಯಾಗಿ ಹಿಂದೂ ದೇವರ ಅವಹೇಳನಕಾರಿಯಾಗಿ ವಾಟ್ಸಾಪ್ ಮಾಧ್ಯಮದ ಮುಖಾಂತರ ಅವಹೇಳನ ಸಂದೇಶಗಳನ್ನ ಹರಿಯ ಬಿಟ್ಟು ಇರುವುದು ಕೋಟ್ಯಂತರ ಹಿಂದುಗಳ ಭಾವನೆ ಗೆ ನೋವುಂಟಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ತಪ್ಪಾಗಿದೆ ಕ್ಷಮಿಸಿ; ಮುರುಗೇಶ ನಿರಾಣಿ
‘ಶಾಸಕರ ಗ್ರೂಪ್‌ಗೆ ಸಂದೇಶ ಕಳುಹಿಸಿದ್ದ ಮೊಬೈಲ್‌ಫೋನ್ ಸಂಖ್ಯೆ ನನ್ನದೇ ಆಗಿದೆ. ಆದರೆ ಅದನ್ನು ನಾನು ಫಾರ್ವರ್ಡ್ ಮಾಡಿಲ್ಲ. ನನ್ನ ಆಪ್ತ ಕಾರ್ಯದರ್ಶಿ ರಾತ್ರಿ ಎಲ್ಲಿಂದಲೋ ಬಂದ ಆ ಸಂದೇಶವನ್ನು ಅಜಾಗರೂಕತೆಯಿಂದ ಫಾರ್ವರ್ಡ್ ಮಾಡಿದ್ದಾರೆ. ತಪ್ಪು ಯಾರು ಮಾಡಿದರೂ ತಪ್ಪೇ. ಹೀಗಾಗಿ ನಾಡಿನ ಜನತೆಯ ಕ್ಷಮೆ ಕೇಳುತ್ತೇನೆ.’
ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಸಂದೇಶವೊಂದು ಶಾಸಕರ ವಾಟ್ಸ್ಆ್ಯಪ್ ಗ್ರೂಪ್‌ಗೆ ಮುರುಗೇಶ ನಿರಾಣಿ ಅವರ ಮೊಬೈಲ್ ಸಂಖ್ಯೆಯಿಂದ ರವಾನೆಯಾಗಿದೆ ಎಂಬ ವಿಚಾರ ವಿವಾದಕ್ಕೆ ತಿರುಗುತ್ತಿದ್ದಂತೆಯೇ ಅವರು ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.
’ನಾನು ಸರ್ವಧರ್ಮ ಸಹಿಷ್ಣುವಾಗಿದ್ದೇನೆ. ಧರ್ಮ-ನಂಬಿಕೆಗಳ ಬಗ್ಗೆ ಹಗುರವಾಗಿ ಎಂದೂ ಮಾತನಾಡಿಲ್ಲ. ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇನೆ. ಸನಾತನ ಧರ್ಮದ ಬಗ್ಗೆಯಂತೂ ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತೇನೆ. ಹಿಂದೂವಾಗಿ ನನ್ನ ಧರ್ಮದ ಬಗ್ಗೆ ನನಗೆ ಅಭಿಮಾನವಿದೆ. ನನ್ನ ಆಪ್ತ ಸಹಾಯಕನ ಅಚಾತುರ್ಯದಿಂದ ಈ ತಪ್ಪು ನಡೆದಿದೆ. ನಾಡಿನ ಜನತೆ ನನ್ನ ಬಗ್ಗೆ ತಪ್ಪು ಭಾವಿಸಬೇಡಿ‘ ಎಂದು ಮಾಧ್ಯಮಗಳಿಗೆ ಕಳುಹಿಸಿದ ಸ್ಪಷ್ಟನೆಯಲ್ಲಿ ಉಲ್ಲೇಖಿಸಿದ್ದಾರೆ.
Follow us on Social media