ಮಂಗಳೂರು: ಚೆನ್ನೈಯಲ್ಲಿ ರಕ್ಷಣಾ ಸಚಿವರು ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ್ದ ತಟರಕ್ಷಣಾ ಪಡೆಯ ಅತ್ಯಾಧುನಿಕ ನೌಕೆ ‘ಐಸಿಜಿಎಸ್ ವರಾಹ’ ಮಂಗಳವಾರ ಪಣಂಬೂರಿನ ನೆಲೆ ಸೇರಿತು.
ಪಣಂಬೂರಿನಲ್ಲಿರುವ ತಟರಕ್ಷಣಾ ಪಡೆಯ ನೆಲೆಯಲ್ಲಿದ್ದುಕೊಂಡು ಈ ನೌಕೆ ಪಶ್ಚಿಮ ಕರಾವಳಿಯ ಮೇಲೆ ನಿಗಾ ಇರಿಸಲಿದೆ.
14 ಅಧಿಕಾರಿಗಳು ಹಾಗೂ 89 ಸಿಬ್ಬಂದಿಯಿಂದ ಕೂಡಿದ ಈ ಹಡಗು ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ, ಭದ್ರತೆಯ ಮೇಲೆ ಕಣ್ಗಾವಲಿರಿಸಲಿದೆ. ತುರ್ತು ಸಂದರ್ಭ ಎರಡು ಎಂಜಿನ್‌ಗಳ ಹೆಲಿಕಾಪ್ಟರ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ಹಡಗು ಹೊಂದಿದೆ. ಕ್ಯಾಪ್ಟನ್ ದುಷ್ಯಂತ್ ಕುಮಾರ್ ನೇತೃತ್ವದಲ್ಲಿ ನವಮಂಗಳೂರು ಕಡಲ ತೀರಕ್ಕೆ ಆಗಮಿಸಿದ ‘ವರಾಹ’ ನೌಕೆಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬ್ಯಾಂಡ್ ವಾದ್ಯಗಳೊಂದಿಗೆ ಸ್ವಾಗತಿಸಿದರು.
ಸೆ.17ರಂದು ಸೇವೆಗೆ ಸೇರ್ಪಡೆಯಾದ ಈ ಹಡಗು ಸೆ.25ರಂದು ನೀರಿಗಿಳಿದಿತ್ತು. ಚೆನ್ನೈಯಿಂದ ಅ.4ರಂದು ಪ್ರಯಾಣ ಆರಂಭಿಸಿ 7ರಂದು ಕೊಚ್ಚಿಗೆ ತಲುಪಿ ಅಲ್ಲಿಂದ ನಾಲ್ಕು ದಿನಗಳ ಕಾಲ ಗಸ್ತಿನ ಬಳಿಕ ಮಂಗಳೂರಿಗೆ ಆಗಮಿಸಿದೆ ಎಂದು ಹಡಗಿನ ಡೆಪ್ಯುಟಿ ಕಮಾಂಡೆಂಟ್ ಸತೀಶ್ ಕುಮಾರ್ ತಿಳಿಸಿದರು. ಸ್ವಾಗತ ಸಮಾರಂಭದ ವೇಳೆ ತಟರಕ್ಷಣಾ ಪಡೆ ಹಿರಿಯ ಅಧಿಕಾರಿಗಳಾದ ರಾಜ್ ಕಮಲ್ ಸಿನ್ಹಾ, ಲಕ್ಷ್ಮೀಕಾಂತ್ ಗಜ್‌ಭಿಯೆ, ಸಿಐಎಸ್‌ಎಫ್ ಅಧಿಕಾರಿ ಅಶುತೋಷ್ ಗೌರ್ ಉಪಸ್ಥಿತರಿದ್ದರು.
Follow us on Social media