ಮಂಗಳೂರು : 5 ದಶಕಕ್ಕೂ ಹಳೆಯದಾದ ನೀರಿನ ಪೈಪ್ ಭೂಮಿಯ ಆಳದಲ್ಲಿ ಒಡೆದು ಹೋಗಿ ರಸ್ತೆ ಕುಸಿದ ಘಟನೆ ನಗರದ ಕಂಕನಾಡಿಯ ಪಂಪ್‌ವೆಲ್ ಜಂಕ್ಷನ್ ಬಳಿ ಮಧ್ಯಾಹ್ನ ವೇಳೆ ನಡೆದಿದೆ.
1956ರಲ್ಲಿ ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ಪೈಪ್ ಅಳವಡಿಸಲಾಗಿತ್ತು. ಅದನ್ನು ಬದಲಾಯಿಸದ ಪರಿಣಾಮ ಶಿಥಿಲಗೊಂಡು ಇಂದು ಒಡೆದು ಹೋಗಿದೆ.
ಇದು ರಸ್ತೆ ಮಧ್ಯೆ ಇರುವ ಪರಿಣಾಮ ಆಳವಾದ ಬಿರುಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ನಗರ ಪ್ರವೇಶಿಸುವ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಸ್ಥಳಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಸಂದೇಶ್ ಗರೋಡಿ, ಪ್ರವೀಣ್ ಚಂದ್ರ ಆಳ್ವ ಭೇಟಿ ನೀಡಿದ್ದು, ತತ್‌ಕ್ಷಣ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಪೈಪ್ ದುರಸ್ತಿ ಹಿನ್ನೆಲೆ ನಗರದ ಮಣ್ಣಗುಡ್ಡೆ, ಉರ್ವ, ಲೇಡಿಹಿಲ್, ಅಶೋಕ್ ನಗರದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದರಿಂದ ನಗರ ನಿವಾಸಿಗಳು ಸಹಕರಿಸಬೇಕೆಂದು ಕೋರಿದ್ದಾರೆ.
Follow us on Social media