ಮಂಗಳೂರು: ಶಾಲಾ ಪಠ್ಯಪುಸ್ತಕ ವಿಚಾರದಲ್ಲಿ ರಾಜ್ಯ ಸರಕಾರ ಮೇಲ್ವರ್ಗದವರನ್ನು ಓಲೈಸಿ, ಬ್ರಹ್ಮರ್ಷಿ ನಾರಾಯಣ ಗುರುಗಳನ್ನು ಅವಮಾನಿಸುತ್ತಿರುವ ಬಗ್ಗೆ ಶೀಘ್ರದಲ್ಲಿಯೇ ಬಿಲ್ಲವ ಸಮಾಜ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಬಿಲ್ಲವ ಸಮಾಜದ ಮುಖಂಡರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಲ್ಲವ ಮುಖಂಡರು, ಶಾಲಾ ಪಠ್ಯಪುಸ್ತಕದಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್, ಭಗತ್ಸಿಂಗ್ ಗೆ ಅವಮಾನವಾಗಿದೆ ಎಂದು ರಾಜ್ಯವ್ಯಾಪಿ ಹೋರಾಟ ಆರಂಭವಾಯಿತು.
ಇದೇ ವೇಳೆ ಆದಿಚುಂಚನ ಮಠದ ಶ್ರೀಗಳು ಕುವೆಂಪು ವಿಚಾರದಲ್ಲಿ ಅಪಸ್ವರ ಎತ್ತಿದಾಗ ಸರಕಾರ ಅವರ ಬಳಿ ಓಗೊಡಲು ಹೋಯಿತು. ಜೊತೆಗೆ ಲಿಂಗಾಯಿತ ಸಮಾಜದ ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದಾಗ ಸರಕಾರವೇ ಅವರ ಬಳಿ ಓಡಿಹೋಯಿತು.
ಆದರೆ ಪ್ರಾರಂಭದಲ್ಲಿ ಮುನ್ನೆಲೆಗೆ ಬಂದ ಬ್ರಹ್ಮರ್ಷಿ ನಾರಾಯಣ ಗುರುಗಳ ವಿಚಾರದಲ್ಲಿ ಸಮಾಜ ಸರಕಾರಕ್ಕೆ ಎಚ್ಚರಿಕೆ ನೀಡಿದರೂ, ಸಮಾಜ ಪಠ್ಯ ಪುಸ್ತಕದಲ್ಲಿ ಗುರುಗಳ ವಿಷಯ ಕೈ ಬಿಟ್ಟು ಹಿಂದುಳಿದ ಸಮುದಾಯಕ್ಕೆ ಅವಮಾನ ಮಾಡಿದೆ.
ಬ್ರಹ್ಮರ್ಷಿ ನಾರಾಯಣ ಗುರುಗಳ ಪಠ್ಯ ಕನ್ನಡ ಮಾಧ್ಯಮದಲ್ಲಿ ಐಚ್ಛಿಕವಾಗಿ ಪ್ರಥಮ ಭಾಷೆಯಾಗಿ ಕನ್ನಡ ಆಯ್ದುಕೊಂಡವರು ಮಾತ್ರ ಓದುತ್ತಾರೆ.
ಆದರೆ ಅದೇ ಐಚ್ಛಿಕ ಪ್ರಥಮ ಭಾಷೆಯಾಗಿ ಸಂಸ್ಕೃತ, ಹಿಂದಿ ತೆಗೆದುಕೊಂಡವರಿಗೆ ಇದು ಅಲಭ್ಯ. ಆದ್ದರಿಂದ ಈ ಪಠ್ಯ ಸಮಾಜ ಪುಸ್ತದಲ್ಲಿಯೇ ಇರಬೇಕು ಯಾಕೆಂದರೆ ಎಲ್ಲಾ ವಿದ್ಯಾರ್ಥಿಗಳು ಇದನ್ನು ಕಲಿಯಲು ಅವಕಾಶ ಸಿಗುತ್ತದೆ.
ಸಮಾಜ ಪಠ್ಯ ಪುಸ್ತಕದಲ್ಲಿ ಕೇವಲ ಹಿಂದುಳಿದ ವರ್ಗದ ಪೆರಿಯಾರ್ ಹಾಗೂ ನಾರಾಯಣ ಗುರುಗಳ ಪಠ್ಯ ಕೈಬಿಟ್ಟಿರುವುದು ದುದೃಷ್ಟಕರ ಹಾಗೂ ರಾಜ್ಯದಲ್ಲಿ 50 ಶೇಕಡಾ ಇರುವ ದಲಿತ, ಹಿಂದುಳಿದ ವರ್ಗಕ್ಕೆ ಮಾಡಿದ ಅಪಮಾನ, ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಗಣರಾಜ್ಯೋತ್ಸವದ ಪರೇಡ್ನ ಸ್ತಬ್ಧಚಿತ್ರದ ಅವಮಾನ, ಮಂಗಳೂರು ವಿಮಾನ ನಿಲ್ದಾಣಕ್ಕೆ ಅವಳಿ ವೀರರ ಕೋಟಿ-ಚೆನ್ನಯ್ಯ ಹೆಸರಿಡುವುದರಲ್ಲಿ ಸರಕಾರ ಅಸಡ್ಡೆ ತೋರಿಸಿದೆ. ಇದೀಗ ಪಠ್ಯ ಪುಸ್ತಕದಲ್ಲೂ ನಾರಾಯಣ ಗುರುಗಳನ್ನು ಅವಮಾನ ಮಾಡಿದೆ.
ಕುವೆಂಪು, ಬಸವಣ್ಣ ಪಠ್ಯದಲ್ಲಿ ಗೊಂದಲಗಳಾದಾಗ ಸರಿಪಡಿಸುತ್ತೇವೆ ಎಂಬ ಹೇಳಿಕೆ ನೀಡುವ ನೀವು ನಾರಾಯಣ ಗುರುಗಳ ವಿಷಯದಲ್ಲಿ ಯಾಕೆ ಮಾತನಾಡುವುದಿಲ್ಲ ಎಂದು ಸರಕಾರವನ್ನು ಪ್ರಶ್ನಿಸಿದರು. ಈಗಲಾದರೂ ಪೂರಕ ಪಠ್ಯ ಸೇರಿಸಬೇಕೆಂಬುವುದು ನಮ್ಮ ಹಕ್ಕೊತ್ತಾಯ.
ಇಲ್ಲದಿದ್ದರೆ ಈ ಬಗ್ಗೆ ಶೀಘ್ರದಲ್ಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಉಗ್ರ ಹೋರಾಟದ ರೂಪುರೇಷೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಗುರುಬೆಳದಿಂಗಳು ಇದರ ಅಧ್ಯಕ್ಷ ಆರ್.ಪದ್ಮರಾಜ್, ಮತ್ತಿತರರು ಉಪಸ್ಥಿತರಿದ್ದರು.
Follow us on Social media