ಮಂಗಳೂರು :ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ತಲೆಎತ್ತುವ ಮೊದಲು ಕರಾವಳಿ ಕರ್ನಾಟಕದಲ್ಲಿ ದುಬಾರಿ ಹಾಗೂ ಸುಸಜ್ಜಿತ ಚಿತ್ರಮಂದಿರ ಎಂದು ಕರೆಯಲ್ಪಟ್ಟಿದ್ದ ಮಂಗಳೂರಿನ ಸೆಂಟ್ರಲ್ ಥಿಯೇಟರ್ ಇನ್ನು ನೆನಪು ಮಾತ್ರ. ನಾಯಕ ದಿಗ್ಗಜ್ಜರ ಚಿತ್ರಗಳ ಬಿಡುಗಡೆಗೆ ಮಂಗಳೂರಿನಲ್ಲಿ ಮೊದಲ ಆಯ್ಕೆಯಾಗಿದ್ದ ಇದೇ ಚಿತ್ರಮಂದಿರಲ್ಲಿ ಶಿವರಾಜ್ ಕುಮಾರ್ ಅಭಿನಯದ ಓಂ ಚಿತ್ರದ ಬೆಳ್ಳಿಹಬ್ಬವೂ ನಡೆದಿತ್ತು. ಈ ಸಂಭ್ರಮಕ್ಕೆ ಮೇರುನಟ ಡಾ.ರಾಜ್ ಕುಮಾರ್ ಅವರು ಉಪಸ್ಥಿತರಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಅವರ ಹಿಟ್ ಚಿತ್ರಗಳಲ್ಲೊಂದಾದ ಇಂದ್ರಜಿತ್ ಈ ಚಿತ್ರಮಂದಿರದಲ್ಲಿ ಶತ ದಿನಗಳನ್ನು ಪೂರೈಸಿತ್ತು. ಇದೇ ಚಿತ್ರಮಂದಿರದ ಮಾಲಕರು ಈ ಚಿತ್ರದ ನಿರ್ಮಾಪಕರಾಗಿದ್ದು ಚಿತ್ರಮಂದಿರದ ಇತಿಹಾಸದ ಇನ್ನೊಂದು ಸ್ವಾರಸ್ಯಕರ ಭಾಗ.
ನಗರದಲ್ಲಿ ಎಲ್ಲರೂ ಮೆಚ್ಚಿಕೊಂಡಿದ್ದ ಇದೇ ಚಿತ್ರಮಂದಿರದಲ್ಲಿ ತುಳು ಸಿನೆಮಾ ಕ್ಷೇತ್ರಕ್ಕೆ ವಿಶೇಷ ಮುನ್ನುಡಿ ಬರೆದ ಹಲವು ಚಿತ್ರಗಳು ಬಿಡುಗಡೆಗೊಂಡಿವೆ. ಕಳೆದ ಎರಡು ವರ್ಷಗಳಿಂದ ಮುಚ್ಚಲ್ಪಟಿದ್ದ ಸೆಂಟ್ರಲ್ ಚಿತ್ರಮಂದಿರ ನಗರದ ಚಿತ್ರಪ್ರೇಮಿಗಳಿಗೆ ಮಾಡಿದ ನಿರಾಸೆ ಅಷ್ಟಿಷ್ಟಲ್ಲ. ಈ ನಡುವೆ ಈ ಚಿತ್ರಮಂದಿರವು ಮಲ್ಟಿಫ್ಲೆಕ್ಸ್ ಸೌಕರ್ಯಗಳೊಂದಿಗೆ ನವೀಕರಣಗೊಳ್ಳಲಿದೆ ಎಂಬ ಮಾತುಗಲೂ ಕೇಳಿ ಬರತೊಡಗಿದ್ದುವು.
ಇದೀಗ ಎಲ್ಲಾ ಊಹಾಪೋಹಗಳಿಗೆ ವಿರಾಮವನ್ನಿತ್ತು ಚಿತ್ರಮಂದಿರದ ಕಟ್ಟಡವನ್ನು ಧರಶಾಯಿಗೊಳಿಸುವ ಕೆಲಸ ಆರಂಭಗೊಂಡಿದೆ. ಅಧಿಕೃತರ ಪ್ರಕಾರ ಈ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣವೊಂದು ತಲೆ ಎತ್ತಲಿದೆ.
Follow us on Social media