ಮಂಗಳೂರು : ಜಾನಪದ ಕ್ಷೇತ್ರದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಸೇವೆ ಸಲ್ಲಿಸಿದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಉದಯ್ ಕುಮಾರ್ ಲಾಯಿಲ ಇವರು ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಳ್ತಂಗಡಿಯ ಬಹುಮುಖ ಪ್ರತಿಭೆ ಉದಯ್ ಕುಮಾರ್ ಲಾಯಿಲ, ಜಾನಪದ ಕ್ಷೇತ್ರದಲ್ಲಿ ಕಳೆದ ಹದಿನೇಳು ವರ್ಷಗಳಿಂದ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ ಕಲಾ ನಿರ್ದೇಶಕರಾಗಿ, ಸಂಘಟಕರಾಗಿ, ಕಲಾವಿದರಾಗಿ ಮಾತ್ರವಲ್ಲದೆ ರಾಜ್ಯ ಮಟ್ಟದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಉದಯ್ ಕುಮಾರ್ ಲಾಯಿಲರವರ ಕಲಾ ಸಾಧನೆಗೆ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಲಭಿಸಿದ್ದು ಮೇ 25ರಂದು ಬೆಂಗಳೂರು ರವೀಂದ್ರ ಕಲಾ ಭವನದಲ್ಲಿ ಪ್ರಶಸ್ತಿ ಪಧಾನ ನಡೆಯಲಿದೆ. ಜಾನಪದ ಕ್ಷೇತ್ರದಲ್ಲಿ ಬೆಳ್ತಂಗಡಿ ತಾಲೂಕಿಗೆ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ತಂದುಕೊಟ್ಟ ಕೀರ್ತಿಗೂ ಉದಯ್ ಕುಮಾರ್ ಅವರು ಪಾತ್ರರಾಗಿದ್ದಾರೆ. ಇವರು ಮೂಲ ಜನಪದ ಕಲೆಯ ವಿವಿಧ ಪ್ರಕಾರಗಳನ್ನು ತಾಲೂಕು ಹಾಗೂ ಜಿಲ್ಲೆಗೆ ಪರಿಚಯಿಸಿದವರು.
ಹಾಡು, ಜನಪದ ಕಮ್ಮಟ, ಬೀದಿನಾಟಕ, ಜನಜಾಗೃತಿ ಕಾರ್ಯಕ್ರಮ, ಮಕ್ಕಳ ಬೇಸಿಗೆ ಶಿಬಿರದ ಆಯೋಜನೆ, ತುಳುನಾಡ ವೈಭವ ಕಾರ್ಯಕ್ರಮ ಮೊದಲಾದವುಗಳ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀಕೃತ ಜಾನಪದ ಕಲಾವಿದರಾಗಿರುವ ಇವರು ದ.ಕ. ಜಿಲ್ಲಾ ಕನ್ನಡ ಜಾನಪದ ಪರಿಷತ್ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ರಾಷ್ಟ್ರೀಯ ಸಂಸ್ಕೃತಿ ವಿನಿಮಯ ಕಾರ್ಯಕ್ರಮಗಳನ್ನು ಹೊರ ರಾಜ್ಯಗಳಲ್ಲಿ ಹಮ್ಮಿಕೊಂಡ ಹೆಮ್ಮೆ ಇವರದ್ದು. ಆಕಾಶವಾಣಿ, ಚಂದನ, ದೂರದರ್ಶನ ಕಾರ್ಯಕ್ರಮಗಳನ್ನು ನೀಡಿರುವ ಇವರಿಗೆ ಮೈಸೂರು ಕಲಾ ಸೌರಭ ಗೌರವ ಪ್ರಶಸ್ತಿಗೂ ಭಾಜನರಾಗಿದ್ದು, ಅದೇ ರೀತಿಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನ ಗೌರವಗಳು ಸಂದಿವೆ.
Follow us on Social media