ಮಂಗಳೂರು : ಕೃಷಿ ಭೂಮಿ ಖರೀದಿಗಿದ್ದ ನಿರ್ಭಂಧವನ್ನು ತೆಗೆದು ಹಾಕಿರುವುದೂ ಸೇರಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತ ಸಂಘಟನೆಗಳು ನಿರಂತರವಾಗಿ ಸರಕಾರವನ್ನು ಒತ್ತಾಯಿಸುತ್ತಿವೆ. ಅಷ್ಟಾದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಡಿಸೆಂಬರ್ 8ರ ಮಂಗಳವಾರದಂದು ರೈತ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿವೆ. ರೈತ ಸಂಘಟನೆಗಳು ನೀಡಿರುವ ಕರೆಗೆ ಕರಾವಳಿ ಭಾಗಗಳಲ್ಲಿ ಕೆಲವು ಸಂಘಟನೆಗಳು ಬೆಂಬಲ ನೀಡಿದ್ದು, ಕಡಲ ನಗರಿಗೆ ಬಂದ್ ಬಿಸಿ ತಟ್ಟುವುದು ಅನುಮಾನವಾಗಿದೆ.
ಪ್ರತಿಯೊಂದು ಬಂದ್ ನಡೆಯುವ ಸಂದರ್ಭದಲ್ಲೂ ಕೂಡ ಕರಾವಳಿ ಭಾಗದ ಜನತೆ ಬೆಂಬಲ ನೀಡುವುದು ವಿರಳವಾಗಿದೆ. ಈ ಬಾರಿಯೂ ಅದೇ ಮುಂದುವರೆಯಲಿದೆ. ಪ್ರಸ್ತುತ ಇರುವ ಮಾಹಿತಿಗಳ ಪ್ರಕಾರ ಹೆಚ್ಚಿನ ಸಂಘಟನೆಗಳಿಂದ ಬೆಂಬಲ ಸಿಗದೇ ಇರುವ ಕಾರಣದಿಂದಾಗಿ ಬಂದ್ ಕರಾವಳಿ ಭಾಗಗಳಲ್ಲಿ ಯಶಸ್ವಿಯಾಗುವುದಿಲ್ಲ ಎನ್ನಲಾಗಿದೆ. ಆದರೆ, ನಗರದ ಪ್ರಮುಖ ಹೆದ್ದಾರಿ ತಡೆಯಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ. ಇದರಿಂದಾಗಿ ಕೆಲವು ಗಂಟೆಗಳ ಕಾಲ ಸಂಚಾರ ದಟ್ಟನೆಯುಂಟಾಗಬಹುದು. ಇನ್ನುಳಿದಂತೆ ಕಾರ್ಮಿಕ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳು ಅಲ್ಲಲ್ಲ್ಲಿ ಪ್ರತಿಭಟನೆಗಳನ್ನು ನಡೆಸುವ ಸಾಧ್ಯತೆಗಳಿವೆ. ಇದರಿಂದಾಗಿ ವಾಹನ ದಟ್ಟನೆಯುಂಟಾಗಬಹುದೇ ಹೊರತು ಇತರ ಅಡಚಣೆಗಳಾಗದು ಎನ್ನಲಾಗಿದೆ.
ಕರಾವಳಿಯಲ್ಲಿ ಬಂದ್ ಗೆ ಬೆಂಬಲ ನೀಡಿರುವ ಪ್ರಮುಖ ಸಂಘಟನೆಗಳು:
ಮಂಗಳೂರಿನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ, ಸಿಐಟಿಯುವಿನಿಂದ ಬೆಂಬಲ
ಉಡುಪಿ ಜಿಲ್ಲೆಯಲ್ಲಿ ಕಿಸಾನ್ ಕಾಂಗ್ರೆಸ್, ಕರ್ನಾಟಕ ಪ್ರಾಂತ ರೈತ ಸಂಘ,
ಸಿಐಟಿಯು, ಸಿಪಿಐಎಂ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ,
ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಸಂಘಟನೆಗಳ ಬೆಂಬಲ
ಭಾರತೀಯ ಕಿಸಾನ್ ಸಂಘ ನಾಳಿನ ಬಂದ್‌ಗೆ ಬೆಂಬಲ ಇಲ್ಲ
ದ.ಕ. ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಏನೇನಿರಲಿದೆ?
ಕೆ.ಎಸ್.ಆರ್.ಟಿ.ಸಿ. ಹಾಗೂ ಖಾಸಗಿ ಬಸ್ ಸಂಚಾರ ಇರಲಿದೆ.
ಟ್ಯಾಕ್ಸಿ, ಆಟೋಗಳ ಓಡಾಟ ಎಂದಿನಂತೆ ಇರಲಿದೆ.
ವ್ಯಾಪಾರ ವಹಿವಾಟು ಎಂದಿನಂತೆ ಮುಂದುವರೆಯಲಿದೆ.
ಕಚೇರಿಗಳು ಕೂಡ ಕಾರ್ಯ ನಿರ್ವಹಿಸಲಿವೆ.
ಆಸ್ಪತ್ರೆ ಸೇರಿದಂತೆ ಆರೋಗ್ಯ ಸಂಬಂಧಿತ ಸೇವೆಗಳು ಲಭ್ಯವಿರಲಿದೆ.