ಮಂಗಳೂರು : ಮಂಗಳೂರು ನಗರದ ಬೋಳೂರು ಮಠದಕಣಿಯ ಕೆನರಾ ಬ್ಯಾಂಕ್ ಎಟಿಎಂ ಕೊಠಡಿಯ ಬಾಗಿಲಿನ ಗಾಜಿಗೆ ಜಲ್ಲಿ ಕಲ್ಲು ಬಿಸಾಡಿ ಗಾಜನ್ನು ಜಖಂಗೊಳಿಸಿ 3540 ರೂ. ನಷ್ಟವನ್ನುಂಟು ಮಾಡಿದ ಆರೋಪಿಗೆ ಮಂಗಳೂರಿನ ಜೆಎಂಎಫ್‌ಸಿ 6 ನೇ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಠದಕಣಿ ನಿವಾಸಿ ಮನೀಶ್‌ಗೆ (20) ಬಂಧಿತ ಆರೋಪಿ.
ಅರೋಪಿ ಮನೀಶ್ 2020 ಜುಲೈ 9 ರಂದು ಬೆಳಗ್ಗೆ ಮಠದಕಣಿಯ ಕೆನರಾ ಬ್ಯಾಂಕ್ ಎಟಿಎಂ ಕೊಠಡಿಯ ಬಾಗಿಲಿನ ಗಾಜಿಗೆ ಜಲ್ಲಿ ಕಲ್ಲು ಬಿಸಾಡಿ ಹಾನಿ ಎಸಗಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯ ಪಿಎಸ್‌ಐ ಹಾರುನ್ ಅಖ್ತರ್ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಜೆಎಂಎಫ್‌ಸಿ 6 ನೇ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾಶ್ರೀ ಎಚ್.ಎಸ್. ಅವರು ವಾದ ವಿವಾದವನ್ನು ಆಲಿಸಿ ಆರೋಪಿ ಮನೀಶ್ ತಪ್ಪಿತಸ್ಥ ಎಂದು ನಿರ್ಣಯಿಸಿ ಮನೀಶ್‌ನಿಗೆ ಐಪಿಸಿ 427 ಅನ್ವಯ 3,500 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದಲ್ಲಿ 10 ದಿನಗಳ ಸಾದಾ ಸಜೆ ಮತ್ತು ಕೆಪಿಡಿಎಲ್‌ಪಿ ಕಾಯ್ದೆಯ ಕಲಂ 2 (ಎ) ಅಡಿಯಲ್ಲಿ 8 ತಿಂಗಳ ಸಾದಾ ಶಿಕ್ಷೆ ಮತ್ತು 2,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 10 ದಿನಗಳ ಸಾಮಾನ್ಯ ಜೈಲು ಶಿಕ್ಷೆ ಆನುಭವಿಸ ಬೇಕೆಂದು ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಜೆಎಂಎಫ್‌ಸಿ 6 ನೇ ನ್ಯಾಯಾಲಯದ ಪ್ರಭಾರ ಹಿರಿಯ ಸಹಾಯಕ ಸರಕಾರಿ ಆಭಿಯೋಜಕ ಮೋಹನ್ ಕುಮಾರ್ ಬಿ. ಅವರು ವಾದಿಸಿದ್ದರು.
Follow us on Social media