ಮಂಗಳೂರು : ಅಪ್ರಾಪ್ತೆಯ ಮೇಲೆ ಸತತವಾಗಿ ಸುಮಾರು ಒಂದು ವರ್ಷ ಕಾಲ ಅತ್ಯಾಚಾರ ಎಸಗಿದವನ ಮೇಲಿನ ಆರೋಪ ಸಾಬೀತಾಗಿದ್ದು , ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ, ಆರೋಪಿಗೆ 10 ವರ್ಷ ಕಠಿನ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ. ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಬೊಳ್ಳರ ಮಜಲು ಮನೆಯ ಪ್ರಸಾದ್ (31) ಶಿಕ್ಷೆಗೊಳಗಾದ ಆರೋಪಿ.
- ಘಟನೆಯ ವಿವರ:
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಪ್ರಸಾದ್ ಮನೆಗೆ ಆತನ ಸಂಬಂಧಿಕ 17 ವರ್ಷದ ಬಾಲಕಿ ಮನೆ ಕೆಲಸಕ್ಕಾಗಿ ಆಗಿಂದಾಗ್ಗೆ ಬರುತ್ತಿದ್ದು, 2018 ಜು. 28ರಂದು ಆಕೆ ಮನೆಗೆ ಬಂದಾಗ ಆಕೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ಆ ಬಳಿಕ ಪದೇ ಪದೆ ಆತ ಅತ್ಯಾಚಾರ ಮಾಡಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿತ್ತು. ಒಮ್ಮೆ ಆಕೆ ಪ್ರತಿಭಟಿಸಿದಾಗ ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಬಾಲಕಿಯ ತಾಯಿ ಮತ್ತು ಅಣ್ಣನಿಗೆ ವಿಷಯ ಗೊತ್ತಾಗಿತ್ತು. ಬಳಿಕ ಮನೆಮಂದಿಯ ಸಲಹೆಯಂತೆ ಬಾಲಕಿ 2019ರ ಜೂ. 13ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಳು. ಪೊಲೀಸರು ಆರೋಪಿ ಪ್ರಸಾದ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.ಪೋಕ್ಸೋ ಕಾಯ್ದೆಯ ಕಲಂ 6ರನ್ವಯ ಆರೋಪಿಗೆ 10 ವರ್ಷ ಕಠಿನ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 2 ತಿಂಗಳ ಸಜೆ, ಐಪಿಸಿ ಸೆ. 506 (ಕೊಲೆ ಬೆದರಿಕೆ) ಅನ್ವಯ 1 ವರ್ಷ ಸಜೆ, ಐಪಿಸಿ ಸೆಕ್ಷನ್ 323 (ಹಲ್ಲೆ) ಅನ್ವಯ 6 ತಿಂಗಳ ಸಜೆಯನ್ನು ವಿಧಿಸಲಾಗಿದೆ. ಈ ಮೂರೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್ ಡಿ. ಮತ್ತು ನಾಗೇಶ್ ಕೆ. ಅವರು ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ರಾಧಾಕೃಷ್ಣ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಸಂತ್ರಸ್ತ ಬಾಲಕಿಗೆ ಸರಕಾರದ ವತಿಯಿಂದ 4 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ದೊರಕಿಸಿ ಕೊಡುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ಅವರು ವಾದಿಸಿದ್ದರು. 16 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, 19 ದಾಖಲೆಗಳನ್ನು ಪರಿಶೀಲಿಸಲಾಗಿತ್ತು.