ಮಂಗಳೂರು: ಕೊರೋನಾ ಲಾಕ್ ಡೌನ್ ದೇಶಾದ್ಯಂತ ರೈತರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದರೂ ಕೂಡ ಅಡಿಕೆ ಬೆಳೆಗಾರರಿಗೆ ಮಾತ್ರ ಇತ್ತೀಚೆಗೆ ಬಂಪರ್ ಮೊತ್ತ ಸಿಗುತ್ತಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬಿಳಿ ಅಡಿಕೆ ಬೆಲೆ ಕೆಜಿ 300 ರೂಪಾಯಿಗೆ ಏರಿಕೆಯಾಗಿದ್ದು ಆಮದನ್ನು ಇನ್ನೂ ಕೆಲ ದಿನಗಳವರೆಗೆ ನಿರ್ಬಂಧಿಸಿದರೆ ಅಡಿಕೆ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಭಾರತಕ್ಕೆ ಶೇಕಡಾ 40ರಷ್ಟು ಅಡಿಕೆ ಆಮದಾಗಿ ಬರುತ್ತದೆ. ಮುಖ್ಯವಾಗಿ ಇಂಡೋನೇಷಿಯಾ ಮತ್ತು ಮ್ಯಾನ್ಮಾರ್ ಗಳಿಂದ ನೇಪಾಳ ಮೂಲಕ ಬರುತ್ತದೆ.ಅನೇಕ ನಿಯಮಗಳಿಂದಾಗಿ ಕಳೆದೊಂದು ವರ್ಷದಿಂದ ಭಾರತಕ್ಕೆ ಆಮದಾಗುವ ಅಡಿಕೆ ಪ್ರಮಾಣ ಕಡಿಮೆಯಾಗಿದೆ. ಭಾರತ-ನೇಪಾಳ ಗಡಿ ಲಾಕ್ ಡೌನ್ ನಿಂದಾಗಿ ಬಂದ್ ಆಗಿರುವುದರಿಂದ ಆಮದು ಇತ್ತೀಚೆಗೆ ಸಂಪೂರ್ಣ ಬಂದ್ ಆಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ಹೊಸ ಅಡಿಕೆಗೆ ಕೆಜಿಗೆ 250 ರೂಪಾಯಿಗಳಿಂದ 300 ರೂಪಾಯಿಗೆ ಹೆಚ್ಚಾಗಿದ್ದರೆ ಹಳೆ ಅಡಿಕೆಗೆ 320 ರೂಪಾಯಿವರೆಗೆ ಹೋಗಿದೆ ಎನ್ನುತ್ತಾರೆ.ಕಳೆದೊಂದು ವಾರದಿಂದ ಇದೇ ಬೆಲೆಯಲ್ಲಿದೆಯಂತೆ. ಪ್ರಸಕ್ತ ವರ್ಷ ಇದೇ ಮೊದಲ ಸಲ ಹೊಸ ಅಡಿಕೆಗೆ ಕೆಜಿಗೆ 300 ರೂಪಾಯಿಗಳವರೆಗೆ ಹೋಗಿದೆ. ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ತೆರೆದರೆ ಬೆಲೆ ಇನ್ನೂ ಹೆಚ್ಚಾಗಬಹುದು ಎನ್ನುತ್ತಾರೆ.
ಬೆಲೆ ಹೆಚ್ಚಾಗಬಹುದೆಂದು ನಿರೀಕ್ಷೆಯಲ್ಲಿದ್ದ ರೈತರು ಕಳೆದೊಂದು ವಾರದಿಂದ ಮಾರುಕಟ್ಟೆಗೆ ಅಡಿಕೆ ತರುತ್ತಿದ್ದಾರೆ. ದಕ್ಷಿಣ ಕನ್ನಡ ಮತ್ತು ಕಾಸರಗೋಡಿನಲ್ಲಿರುವ ಕ್ಯಾಂಪ್ಕೊ ಅಡಿಕೆ ಸಂಗ್ರಹ ಕೇಂದ್ರಗಳಿಗೆ ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ 2 ಸಾವಿರಕ್ಕೂ ಅಧಿಕ ಕ್ವಿಂಟಾಲ್ ಅಡಿಕೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
Follow us on Social media