ಬೆಂಗಳೂರು: ಕೃಷಿ ಭೂಮಿ ಖರೀದಿಗಿದ್ದ ನಿರ್ಭಂಧವನ್ನು ತೆಗೆದು ಹಾಕಿರುವುದೂ ಸೇರಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಭಾರತ ಬಂದ್ ಗೆ ಕರೆ ನೀಡಲಾಗಿದ್ದು, ರಾಜ್ಯದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ದೇಶದ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಭಾರತ ಬಂದ್ ಗೆ ರಾಜ್ಯದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ಪಡೆ, ಕನ್ನಡ ಚಳವಳಿ ವಾಟಾಳ್ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಅಸಂಖ್ಯಾತ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು ಆ ಮೂಲಕ ರಾಜ್ಯ ಬಹುತೇಕ ಸ್ತಬ್ದವಾಗಲಿದೆ.
ಕೃಷಿ ಭೂಮಿ ಖರೀದಿಗಿದ್ದ ನಿರ್ಭಂಧವನ್ನು ತೆಗೆದು ಹಾಕಿರುವುದರಿಂದ ದುಡ್ಡಿದ್ದವರು ಯಾರೇ ಆದರೂ ದಂಡಿಯಾಗಿ ಭೂಮಿ ಖರೀದಿಸಬಹುದು. ಇದರಿಂದಾಗಿ ಕೃಷಿ ಹಿಡುವಳಿಗಳ ಸಂಖ್ಯೆ ಕಡಿಮೆ ಆಗುವುದಲ್ಲದೆ ಆಹಾರ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇದರಿಂದಾಗಿ ಆಹಾರ ಪದಾರ್ಥಗಳ ಮೇಲೆ ಉಳ್ಳವರು ನಿಯಂತ್ರಣ ಸಾಧಿಸಲಿದ್ದು ಅದೇ ಕಾಲಕ್ಕೆ ಮನಸೋ ಇಚ್ಚೆ ಭೂಮಿ ಖರೀದಿಸುವವರು ರಿಯಲ್ ಎಸ್ಟೇಟ್ ಸೇರಿದಂತೆ ಹಲ ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿ ಬಳಕೆಯಾಗಲಿದೆ.
ಇದೇ ರೀತಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ತಿದ್ದುಪಡಿ ಕಾಯ್ದೆಗಳು ರೈತ ಸಮುದಾಯವನ್ನು ಬೀದಿಗೆ ತಳ್ಳಲಿವೆ. ಹೀಗಾಗಿ ತಕ್ಷಣವೇ ಈ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ರೈತ, ಮತ್ತಿತರ ಸಂಘಟನೆಗಳು ಒತ್ತಾಯಿಸಿವೆ. ಈ ಒತ್ತಾಯದ ಅಂಗವಾಗಿ ಮಂಗಳವಾರ ಭಾರತ್ ಬಂದ್ ನಡೆಯಲಿದ್ದು ನೂರಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.
ರೈತರ ಈ ಆಂದೋಲನಕ್ಕೆ ವಿರೋಧ ಪಕ್ಷಗಳು, ಕಾರ್ಮಿಕ ಸಂಘಗಳು, ಲಾರಿ, ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಹಾಗೂ ಬ್ಯಾಂಕ್ ನೌಕರರೂ ಸಹ ಬೆಂಬಲ ನೀಡಿವೆ.
ನಾಳೆ ಏನಿರುತ್ತದೆ?
ಭಾರತ್ ಬಂದ್‌ದಿನ ಅಗತ್ಯ ವಸ್ತುಗಳಿಗೆ ವಿನಾಯಿತಿ ಇದೆ. ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹಾಲು ದೊರೆಯುತ್ತದೆ ಮತ್ತು ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಇರುತ್ತದೆ.
ಏನಿರಲ್ಲ?
ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಭಾರತ್ ಬಂದ್ ಬೆಂಬಲಿಸಿರುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟಾಗಬಹುದು. ಅಲ್ಲದೆ ಬ್ಯಾಂಕ್ ಒಕ್ಕೂಟಗಳು ರೈತರಿಗೆ ಬೆಂಬಲ ನೀಡಿದ್ದು, ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು.
ಎಂಪಿಎಂಸಿಯ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಬಂದ್‌ಗೆ ಬೆಂಬಲ ಕೊಟ್ಟಿದ್ದು ವ್ಯಾಪಾರ ವಹಿವಾಟು ಸ್ಥಗಿತವಾಗುವ ನಿರೀಕ್ಷೆ ಇದೆ.
ಇನ್ನು ನಗರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗುತ್ತದೆ ಎಂದು ರೈತರು ಹೇಳಿದ್ದಾರೆ. ಇದರಿಂದಾಗಿ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ಮಾಡಲಾಗುತ್ತದೆ ಎಂದು ರೈತ ಸಂಘಟನೆಗಳು ಹೇಳಿವೆ.
Follow us on Social media