ನವದೆಹಲಿ: ರಕ್ಷಣಾ ಸಚಿವಾಲಯ ಆತ್ಮನಿರ್ಭರ ಯೋಜನೆಗೆ ಉತ್ತೇಜನ ನೀಡಲು ಸಿದ್ಧವಾಗಿದ್ದು, ದೇಶೀಯ ಕಂಪನಿಗಳ ಜತೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಿಂದ 101 ರಕ್ಷಣಾ ಸಾಮಗ್ರಿಗಳ ಆಮದಿನ ಮೇಲೆ ನಿಷೇಧ ಹೇರಲಾಗಿದೆ.
ಮದ್ದು ಗುಂಡು, ಫಿರಂಗಿ ಸೇರಿದಂತೆ 101 ವಿವಿಧ ಉಪಕರಣಗಳನ್ನು ದೇಶದಲ್ಲೇ ತಯಾರಿಸಲು ನಿರ್ಧಾರ ಮಾಡಲಾಗಿದೆ. ಇದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಸಿಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಸೇನೆಯಲ್ಲಿ 2020 ರಿಂದ 2024ರ ಮಧ್ಯೆ ಮಹತ್ವದ ಕಾರ್ಯ ನಡೆಯಲಿದೆ. ಸಂಪೂರ್ಣವಾಗಿ ರಕ್ಷಣಾ ಸಾಮಾಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ದುಬಾರಿ ವಿದೇಶಿ ರಕ್ಷಣಾ ಸಾಮಗ್ರಿಗಳ ಬದಲಾಗಿ ದೇಶೀಯ ರಕ್ಷಣಾ ಸಾಮಗ್ರಿಗಳನ್ನು ಪ್ರಚುರಪಡಿಸಿ ದೇಶದ ಸೇನೆಯ ಮೂರೂ ಪಡೆಗಳ ಶಕ್ತಿ ಬಲವರ್ಧನೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಸ್ವಾವಲಂಬನೆಗೆ ಕರೆ ನೀಡಿರುವ ಪ್ರಧಾನಿ ಮೋದಿ ಆತ್ಮನಿರ್ಭರ ಭಾರತಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಅವರಿಂದ ಪ್ರೇರಣೆ ಪಡೆದು ಇದುವರೆಗೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ 101 ರಕ್ಷಣಾ ಸಾಮಗ್ರಿಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ರಕ್ಷಣಾ ಇಲಾಖೆಯ ಸ್ವಾವಲಂಬನೆ ಹಾದಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ವಿದೇಶಗಳಿಂದ ವಸ್ತುಗಳ ಆಮದಿಗೆ ನಿಷೇಧ ಹೇರುವುದರಿಂದ ನಮ್ಮ ದೇಶದ ರಕ್ಷಣಾ ಕೈಗಾರಿಕೆ ಮತ್ತು ಉತ್ಪಾದನೆ ವಲಯಗಳಿಗೆ ಹೆಚ್ಚು ಅವಕಾಶಗಳು, ಉದ್ಯೋಗಗಳು ಸಿಗುತ್ತವೆ. ಆತ್ಮನಿರ್ಭರ ಭಾರತಕ್ಕೆ ಇದು ದಾರಿ ಮಾಡಿಕೊಡುತ್ತದೆ. ದೇಶೀಯ ಕೈಗಾರಿಕೆಗಳು ತಮ್ಮ ವಿನ್ಯಾಸ ಮತ್ತು ಅಭಿವೃದ್ಧಿಯ ಸಾಮರ್ಥ್ಯಗಳನ್ನು ಬಳಸಿ ವಸ್ತುಗಳನ್ನು ತಯಾರು ಮಾಡಬಹುದು ಎಂದಿದ್ದಾರೆ.
‘ನೆಗೆಟಿವ್ ಆರ್ಮ್ಸ್ ಲಿಸ್ಟ್’:ಇದರಡಿಯಲ್ಲಿ ಯಾವ ವಸ್ತುಗಳನ್ನು ನಿಷೇಧಿಸಲಾಗುತ್ತದೆ ಎಂದು ವರ್ಷವಾರು ಸಮಯಸೂಚಿಯನ್ನು ರಕ್ಷಣಾ ಇಲಾಖೆ ನೀಡಲಿದೆ. ಅದರಂತೆ ಆ ನಿರ್ದಿಷ್ಟ ರಕ್ಷಣಾ ಸಾಮಗ್ರಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಆ ದಿನದಿಂದ ನಿರ್ಬಂಧ ಹೇರಲಾಗುತ್ತದೆ. ಈ ಪಟ್ಟಿಯನ್ನು ಕಾಲಕಾಲಕ್ಕೆ ಅಪ್ ಡೇಟ್ ಮಾಡಲಾಗುತ್ತದೆ. ದೇಶೀಯ ಮಾರುಕಟ್ಟೆಯೆಂದು ರಕ್ಷಣಾ ಸಾಮಗ್ರಿಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಕಾಲಕ್ಕೆ ಸರಿಯಾಗಿ ವಸ್ತುಗಳು ಪೂರೈಕೆಯಾಗಬೇಕು. ಸಂಬಂಧಪಟ್ಟವರೊಂದಿಗೆ ಹಲವು ಸುತ್ತುಗಳ ಮಾತುಕತೆ ನಡೆಸಿ ಈ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
101 ವಸ್ತುಗಳ ಮೇಲೆ ಆಮದು ನಿಷೇಧ ಹೇರುವುದರಿಂದ ಸುಮಾರು 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯನ್ನು ಮುಂದಿನ 6-7 ವರ್ಷಗಳಲ್ಲಿ ದೇಶೀಯ ಕೈಗಾರಿಕೆಗಳ ಮೇಲೆ ವಿನಿಯೋಗಿಸಬಹುದು. ಏಪ್ರಿಲ್ 2015ರಿಂದ ಆಗಸ್ಟ್ 2020ರವರೆಗೆ ಸರಿಸುಮಾರು 3.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತೀಯ ರಕ್ಷಣಾ ಇಲಾಖೆಯ ಮೂರೂ ಪಡೆಗಳಲ್ಲಿ ಸುಮಾರು 260 ಯೋಜನೆಗಳ ಮೇಲೆ ಗುತ್ತಿಗೆ ಮಾಡಿಕೊಳ್ಳಲಾಗಿತ್ತು.
Follow us on Social media