ನವದೆಹಲಿ: ಕ್ಯಾಪ್ಟನ್ ಕೂಲ್ ಖ್ಯಾತಿಯ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ದೇಶದ ಪರ ತಮ್ಮ ಆಟವನ್ನು ಮುಗಿಸಿದ್ದು, ಅವರಿನ್ನು ಟೀಮ್ ಇಂಡಿಯಾ ಪ್ರತಿನಿಧಿಸುವುದಿಲ್ಲ ಎಂದು ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ವರ್ಷ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ವೇಳೆ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಧೋನಿ ತೆರೆ ಮರೆಗೆ ಸರಿದಿದ್ದಾರೆ. ಇತ್ತ ನಿವೃತ್ತಿ ಘೋಷಿಸದೆ, ಅತ್ತ ಭವಿಷ್ಯದ ಯೋಜನೆಗಳನ್ನು ಕೂಡ ಪ್ರಕಟಿಸದೆ ಸಾಕಷ್ಟು ಗೌಪ್ಯತೆ ಕಾಯ್ದುಕೊಂಡಿದ್ದಾರೆ.
ಇನ್ನು ಕಳೆದ ವಾರ ಧೋನಿ ನಿವೃತ್ತಿಯ ಸುದ್ದಿ ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸ್ಪೋಟಗೊಂಡಿತ್ತು. ಆದರೆ ಇದೆಲ್ಲಾ ಕೇವಲ ವದಂತಿ ಎಂಬುದನ್ನು ಧೋನಿ ಅವರ ಧರ್ಮಪತ್ನಿ ಸಾಕ್ಷಿ ಸಿಂಗ್ ಸ್ಪಷ್ಟ ಪಡಿಸಿದ್ದರು. ಇದಕ್ಕೂ ಮೊದಲು ಧೋನಿ ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಕೊನೆಯ ಬಾರಿ ಕಾಣಿಸಿಕೊಳ್ಳಲಿದ್ದಾರೆ ಎಂದು ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದರು.
ಆದರೆ, ಅನುಭವಿ ಆಫ್ ಸ್ಪಿನ್ನರ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಹರ್ಭಜನ್ ಸಿಂಗ್ ಕ್ಯಾಪ್ಟನ್ ಕೂಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಅಂತ್ಯಗೊಂಡಿದೆ ಎಂದಿದ್ದಾರೆ.
“ಸಿಎಸ್ಕೆ ಶಿಬಿರದಲ್ಲಿ ಇದ್ದಾಗ ಹಲವರು ನನ್ನ ಬಳಿ ಧೋನಿ ಆಡುತ್ತಾರೆಯೇ? ಟಿ20 ವಿಶ್ವಕಪ್ಗೆ ಅವರ ಆಯ್ಕೆಯಾಗುತ್ತದೆಯೇ? ಎಂದೆಲ್ಲಾ ಪ್ರಶ್ನಿಸಿದ್ದರು. ಇದಕ್ಕೆ ನನಗೆ ತಿಳಿದಿಲ್ಲ. ಈ ಬಗ್ಗೆ ಧೋನಿಗಷ್ಟೇ ಗೊತ್ತು. ಆಡಬೇಕೊ ಬೇಡವೋ ಎಂಬುದು ಅವರ ನಿರ್ಧಾರ ಎಂದು ಉತ್ತರಿಸಿದ್ದೆ,” ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಜೊತೆಗಿನ ಇನ್ಸ್ಟಾಗ್ರಾಮ್ ಲೈವ್ ಚಾಟ್ನಲ್ಲಿ ಟರ್ಬನೇಟರ್ ಖ್ಯಾತಿಯ ಆಫ್ಸ್ಪಿನ್ನರ್ ಹೇಳಿದ್ದಾರೆ.
“ಧೋನಿ ಐಪಿಎಲ್ 2020 ಟೂರ್ನಿಯಲ್ಲಿ ಆಡುವುದು ಶೇ.100 ರಷ್ಟು ಖಚಿತ. ಆದರೆ, ಭಾರತ ತಂಡಕ್ಕೆ ಆಡಲು ಬಯಸುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕಿದೆ. ನನ್ನ ಪ್ರಕಾರ ಅವರು ಮತ್ತೆ ಆಡುವುದಿಲ್ಲ. ಭಾರತ ತಂಡದ ಪರ ಅವರು ಆಟ ಮುಗಿಸಿದ್ದಾರೆ. ಅವರ ಬಗ್ಗೆ ನಾನು ತಿಳಿದಿರುವ ಪ್ರಕಾರ ಮತ್ತೆ ನೀಲಿ ಜರ್ಸಿಯನ್ನು ತೊಡುವುದಿಲ್ಲ,” ಎಂದಿದ್ದಾರೆ.
Follow us on Social media