ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಭಾರತದಲ್ಲಿ ಓವರ್ ದಿ ಟಾಪ್ (ಒಟಿಟಿ) ವಿಭಾಗದ ಚಂದಾದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಶೇ.75 ರಷ್ಟಕ್ಕಿಂತಲೂ ಹೆಚ್ಚಿನ ಭಾರತೀಯರು ಲಾಕ್ ಡೌನ್ ಅವಧಿಯಲ್ಲಿ ವಿವಿಧ ಒಟಿಟಿ ವಿಭಾಗಗಳಲ್ಲಿ ಚಂದಾದಾರತ್ವ ಖರೀದಿಸಿದ್ದಾರೆ ಎಂದು ಹೊಸ ಸಮೀಕ್ಷೆ ಮೂಲಕ ತಿಳಿದುಬಂದಿದೆ.
ಮಾರುಕಟ್ಟೆ ಹಾಗೂ ವಿಶ್ಲೇಷಣಾ ಸಂಸ್ಥೆ ವೆಲೋಸಿಟಿ ಎಂಆರ್ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ 3,000 ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು ಈ ಪೈಕಿ ಶೇ.73 ರಷ್ಟು ಜನರು ಹಾಟ್ ಸ್ಟಾರ್ ಹಾಗೂ ಯ್ಯೂಟ್ಯೂಬ್ ನ್ನು ವೀಕ್ಷಿಸಲು ಪ್ರಾರಂಭಿಸಿದ್ದರೆ ಅಮೇಜಾನ್ ಪ್ರೈಮ್ ನೆಟ್ ಫ್ಲಿಕ್ಸ್ (ಒಟಿಟಿ ವಿಭಾಗ) ಗಳ ವೀಕ್ಷಕರು, ಚಂದಾರಾರ ಸಂಖ್ಯೆ ಅನುಕ್ರಮವಾಗಿ ಶೇ.67, ಶೇ.65 ರಷ್ಟು ಏರಿಕೆಯಾಗಿದೆ.
ಇನ್ನು ಸಾಮಾಜಿಕ ಜಾಲತಾಣದ ಆಪ್ ಗಳಾದ ವಾಟ್ಸ್ ಆಪ್ ಗಳನ್ನು ಬಳಕೆ ಮಾಡುವವರ ಸಂಖ್ಯೆ ಶೇ.92, ಯೂಟ್ಯೂಬ್ ಬಳಕೆದಾರರ ಸಂಖ್ಯೆ ಶೇ.84, ಫೇಸ್ ಬುಕ್ ಬಳಕೆದಾರರ ಸಂಖ್ಯೆ ಶೇ.80 ರಷ್ಟು ಲಾಕ್ ಡೌನ್ ವೇಳೆ ಏರಿಕೆ ಕಂಡಿದೆ.
ಲಾಕ್ ಡೌನ್ ಅವಧಿಯಲ್ಲಿ ಶೇ.80 ರಷ್ಟು ಜನರು ಸಿನಿಮಾ ವೀಕ್ಷಿಸುವುದನ್ನು ಇಷ್ಟಪಟ್ಟರೆ, ರಾಷ್ಟ್ರೀಯ ಸುದ್ದಿಯನ್ನು ವೀಕ್ಷಿಸುವವರ ಸಂಖ್ಯೆ ಶೇ.65 ರಷ್ಟು ಏರಿಕೆಯಾಗಿದೆ ಎಂದು ವೆಲೋಸಿಟಿ ಎಂಆರ್ ಸಮೀಕ್ಷೆ ಮೂಲಕ ತಿಳಿದುಬಂದಿದೆ. ಇನ್ನು ಲಾಕ್ ಡೌನ್ ಅವಧಿಯನ್ನು ಕೌಶಲಗಳನ್ನು ವೃದ್ಧಿಸಿಕೊಳ್ಳುವುದಕ್ಕೆ ಸಿಕ್ಕಿರುವ ಉತ್ತಮ ಅವಕಾಶ ಎಂದು ಶೇ.52 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಇ-ಕಲಿಕೆ ಸಂಸ್ಥೆಗಳಾದ ಬೈಜ್ಯೂಸ್ ಲಾಕ್ ಡೌನ್ ಅವಧಿಯಲ್ಲಿ ಶೇ.33 ರಷ್ಟು ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಂಡಿದೆ.
Follow us on Social media