ಹೊಸದಿಲ್ಲಿ : ಭಾರತದ ಕಡು ಬಡತನ ಪ್ರಮಾಣವು ಕಡಿಮೆಯಾಗಿದೆ ಎಂದು ವಿಶ್ವಬ್ಯಾಂಕ್ ನ ಪ್ರಾಥಮಿಕ ವರದಿ ಮಾಹಿತಿ ನೀಡಿದೆ. ಭಾರತದ ಕಡು ಬಡತನ ಪ್ರಮಾಣವು 2011ರಲ್ಲಿ ಇದ್ದುದಕ್ಕಿಂತ 2019ರಲ್ಲಿ ಶೇ 12.3ರಷ್ಟು ಕಡಿಮೆಯಾಗಿದೆ. 2011ರಲ್ಲಿ ಶೇ 22.5ರಷ್ಟು ದಾಖಲಾಗಿದ್ದ ಭಾರತದ ಬಡತನ ದರವು 2019ರಲ್ಲಿ ಶೇ 10.2ಕ್ಕೆ ಕುಸಿತ ಕಂಡಿದೆ. ಅದರಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಗಣನೀಯ ಪ್ರಮಾಣದಲ್ಲಿ ಬಡತನ ಇಳಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ನೀತಿ ಸಂಶೋಧನೆ ಮಾಹಿತಿ ನೀಡಿದೆ.
ಭಾರತ ದೇಶವು ಕಡು ಬಡತನವನ್ನು ಬಹುತೇಕ ನಿರ್ಮೂಲನೆ ಮಾಡಿದೆ ಹಾಗೂ ಸರ್ಕಾರಿ ಪ್ರಾಯೋಜಿತ ಆಹಾರ ಪೂರೈಕೆಗಳ ಯೋಜನೆಗಳ ಮೂಲಕ ಅನುಭೋಗ ಅಸಮಾನತೆ ಮಟ್ಟವನ್ನು 40 ವರ್ಷಗಳಲ್ಲಿಯೇ ಕಡಿಮೆ ಮಟ್ಟಕ್ಕೆ ತಂದಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಇತ್ತೀಚೆಗೆ ತನ್ನ ಪ್ರಾಥಮಿಕ ವರದಿಯಲ್ಲಿ ಮಾಹಿತಿ ನೀಡಿತ್ತು.
ಭಾರತದಲ್ಲಿ ನಗರ ಭಾಗಕ್ಕೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಬಡತನ ಇಳಿಕೆ ಪ್ರಮಾಣದಲ್ಲಿ ಅಧಿಕವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 2011ರಲ್ಲಿ ಶೇ 26.3ರಷ್ಟಿದ್ದ ಬಡತನ ದರ, 2019ರಲ್ಲಿ ಶೇ 11.6ಕ್ಕೆ ತಗ್ಗಿದೆ. ಹಾಗೆಯೇ ನಗರ ಪ್ರದೇಶಗಳಲ್ಲಿ ಶೇ 14.2ರಷ್ಟಿದ್ದ ಬಡತನವು 2019ರ ವೇಳೆಗೆ ಶೇ 6.3ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.
Follow us on Social media