ಬೆಂಗಳೂರು: ಓಮಿಕ್ರಾನ್ ತಳಿ ಬಿಎ-2 ಸಬ್ ವೇರಿಯಂಟ್ ರೂಪಾಂತರವು ಜಾಗತಿಕವಾಗಿ ಹರಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು, ಭವಿಷ್ಯದಲ್ಲಿ ಯಾವುದೇ ಕೋವಿಡ್ ಅಲೆ ಎದುರಾದರೂ ಅದನ್ನು ನಿಭಾಯಿಸಲು ರಾಜ್ಯವು ಸನ್ನದ್ಧವಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೈದ್ಯರು, ಮೂಲಸೌಕರ್ಯ ಮತ್ತು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಸೂಕ್ತ ರೀತಿಯಲ್ಲಿ ಹೆಚ್ಚಿಸಲಾಗಿದೆ. ನಾಲ್ಕನೇ ಅಲೆ ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಕೋವಿಡ್’ನ ಯಾವುದೇ ಅಲೆ ಎದುರಿಸಲು ಲಸಿಕೆ ಕವಚ ನಮಗೆ ಸಹಾಯ ಮಾಡಲಿದೆ. ಭವಿಷ್ಯದಲ್ಲಿ ಯಾವುದೇ ರೀತಿಯ ಕೋವಿಡ್ ಅಲೆಗಳು ಎದುರಾದರೂ ಇದು ನಮ್ಮನ್ನು ರಕ್ಷಣೆ ಮಾಡಲಿದೆ ಎಂದು ಹೇಳಿದ್ದಾರೆ.
ಮುಂದೆ ಎದುರಾಗುವ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ಅದನ್ನು ಅರ್ಥ ಮಾಡಿಕೊಳ್ಳಲು, ಕಠಿಣ ಕ್ರಮಗಳ ಅತ್ಯಗತ್ಯಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಅಂತ್ಯಗೊಂಡಿದೆ ಎಂದು ಘೋಷಿಸುವವರೆಗೆ ಕೋವಿಡ್ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಪ್ರಮುಖವಾಗಿ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಿದ್ದಾರೆ.
Follow us on Social media