ಬೆಳ್ತಂಗಡಿ: ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಕರಣಿಕ ಮತ್ತು ಗ್ರಾಮ ಸಹಾಯಕನಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಜೆ ಹಾಗೂ ದಂಡ ವಿಧಿಸಿ ಶಿಕ್ಷೆ ನೀಡಿದೆ.
ಶಿಕ್ಷೆಗೊಳಗಾದವರನ್ನು ಪುತ್ತಿಲ ಗ್ರಾಮದ ಗ್ರಾಮ ಕರಣಿಕನಾಗಿದ್ದ ಎನ್. ಶೇಷಾದ್ರಿ ಮತ್ತು ಗ್ರಾಮ ಸಹಾಯಕನಾಗಿದ್ದ ತಿಮ್ಮಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.
2014ರ ಜೂ. 24ರಂದು ಈ ಘಟನೆ ನಡೆದಿದ್ದು ವ್ಯಕ್ತಿಯೋರ್ವರು ತಮ್ಮ ವಾಸದ ಮನೆಯನ್ನು ಸಕ್ರಮಗೊಳಿಸುವ ಸಂಬಂಧ ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಗ್ರಾ.ಪಂ. ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದ್ದರು.
ಆಗ ತೆಕ್ಕಾರು ಬಾರ್ಯ ಪುತ್ತಿಲ ಗ್ರಾಮದ ಗ್ರಾಮ ಕರಣಿಕರಾಗಿದ್ದ ಎನ್. ಶೇಷಾದ್ರಿ ಮತ್ತು ಗ್ರಾಮ ಸಹಾಯಕನಾಗಿದ್ದ ತಿಮ್ಮಪ್ಪ ಪೂಜಾರಿ 15,000 ರೂ. ಲಂಚ ನೀಡುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ವಿಚಾರಣೆ ನಡೆಸಿ ನಿನ್ನೆ ಅಂತಿಮ ತೀರ್ಪು ನೀಡಿ ಆರೋಪಿಗಳಿಗೆ ಕಲಂ 235 ಸಿಆರ್‌ಪಿಸಿ ಅಡಿಯಲ್ಲಿ
ಪಿಸಿ ಕಾಯಿದೆ 1988 ಕಲಂ 7ರಂತೆ 3 ವರ್ಷಗಳ ಸಾದಾ ಸಜೆ ಮತ್ತು 20,000 ರೂ. ದಂಡ ವಿಧಿಸಿದ್ದಾರೆ. ಆರೋಪಿಗಳು ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 8 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ.
ಅಲ್ಲದೆ ಪಿಸಿ ಕಾಯಿದೆ 1988 ಕಲಂ 13 (1) (ಡಿ) ಜತೆಗೆ 13(2)ರಲ್ಲಿ 4 ವರ್ಷಗಳ ಸಾದಾ ಸಜೆ ಹಾಗೂ 30,000 ರೂ. ದಂಡ ವಿಧಿಸಿದ್ದಾರೆ.
ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 8 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಲೋಕಾಯುಕ್ತ ಪೊಲೀಸ್‌ನಿರೀಕ್ಷಕ ಎಸ್. ವಿಜಯ ಪ್ರಸಾದ್‌ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಮಂಗಳೂರಿನ
ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ. ಆರೋಪಿಗಳು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
Follow us on Social media