ಬೆಳ್ತಂಗಡಿ : ಬೆಂಗಳೂರಿನ ಉತ್ತರ ವಲಯದ ಬಿಜೆಪಿ ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ಬಂಡೆ ಕೋಡಿಗೇನ ಹಳ್ಳಿ ನಿವಾಸಿ ಹಾಗೂ ಯಲಹಂಕ ಮತ್ತು ಬಂಡಿ ಕೋಡಿಗೇನ ಹಳ್ಳಿಯಲ್ಲಿರುವ ಶ್ರೀ ಜ್ಞಾನಕ್ಷಿ ವಿದ್ಯಾಮಂದಿರದ ಮಾಲಕರಾಗಿರುವ ನರೇಂದ್ರ ಕುಮಾರ್ ಕೆ.ಆರ್.(46) ಧರ್ಮಸ್ಥಳದಲ್ಲಿ ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದ್ದಾರೆ.
ಮಂಗಳವಾರದಂದು ಬೆಂಗಳೂರಿನಿಂದ ತಮ್ಮ ಶಾಲೆಯ ಶಿಕ್ಷಕಿಯರನ್ನು ಪುತ್ತೂರು ವಿವೇಕಾನಂದ ಕಾಲೇಜಿಗೆ ತರಬೇತಿಗಾಗಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಸ್ನೇಹಿರರೊಂದಿಗೆ ಟಿಟಿ ವಾಹನದಲ್ಲಿ ಕರೆದುಕೊಂಡು ಬಂದಿದ್ದರು. ಶಿಕ್ಷಕಿಯರನ್ನು ವಿವೇಕಾನಂದ ಕಾಲೇಜಿಗೆ ಬಿಟ್ಟ ಬಳಿಕ ಪತ್ನಿ, ಮಕ್ಕಳು ಸೇರಿ ಒಟ್ಟು 7 ಮಂದಿ ಧರ್ಮಸ್ಥಳ ಸಮೀಪದ ಗೆಸ್ಟ್‌ಹೌಸ್ ನಲ್ಲಿ ರೂಂ ಪಡೆದಿದ್ದರು. ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದರ್ಶನ ಪಡೆದು ಆ ಬಳಿಕ ಬೆಂಗಳೂರಿಗೆ ಮರಳಲು ಯೋಜನೆಯನ್ನು ಹಾಕಿಕೊಂಡಿದ್ದರು ಎನ್ನಲಾಗಿದೆ. ಆದರೆ, ಬುಧವಾರ ಬೆಳಗ್ಗೆ ಶೌಚಾಲಯಕ್ಕೆ ತೆರಳಿದಾಗ ಏಕಾಏಕಿ ನರೇಂದ್ರ ಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರ ಪತ್ನಿ ಟಿಟಿ ಚಾಲಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತತ್‌ಕ್ಷಣ ಗೆಸ್ಟ್‌ಹೌಸ್‌ನಿಂದ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದರು. ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ತರಲಾಗಿತ್ತು.
ನರೇಂದ್ರ ಕುಮಾರ್ ಅವರ ಪತ್ನಿ ಸಂದರ್ಶಿನಿ ಶ್ರೀ ಜ್ಞಾನಕ್ಷಿ ವಿದ್ಯಾಕೇಂದ್ರದಲ್ಲಿ ಪ್ರಾಂಶುಪಾಲರಾಗಿದ್ದಾರೆ.ನರೇಂದ್ರ ಕುಮಾರ್ ಅವರು ಪತ್ನಿ ಹಾಗೂ ಮಕ್ಕಳಾದ ಪ್ರಜ್ವಲ್, ಕಶಿಕಾ ಅವರನ್ನು ಅಗಲಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow us on Social media