Breaking News

ಬೆಳಗಾವಿ: ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆಯನ್ನು ಮಾರಿದ ತಾಯಿ

ಬೆಳಗಾವಿ: ತನ್ನ ಮಗಳು ಎಸ್‍ಎಸ್‍ಎಲ್‍ಸಿ ಆನ್‍ಲೈನ್ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ಕಿವಿಯೊಲೆ ಮಾರಿದ ಕಣ್ಣೀರಿನ ಕಥೆ ಬೆಳಗಾವಿಯಲ್ಲಿ ನಡೆದಿದೆ. ಮಹಾನಗರದ ಕ್ಲಬ್ ರಸ್ತೆಯಲ್ಲಿರುವ ತಗಡಿನ ಶೆಡ್‍ನಲ್ಲಿ ವಾಸವಿರುವ ದೇವದಾಸಿ ಜೋಗಮ್ಮ ಸರೋಜಿನಿ ಬೇವಿನಕಟ್ಟಿ ಮಕ್ಕಳಿಗಾಗಿ ಕಿವಿಯೊಲೆ ಮಾರಿ ಮೊಬೈಲ್ ತಂದುಕೊಟ್ಟಿದ್ದಾರೆ.

ಜೋಗ ಬೇಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಈ ಜೋಗಮ್ಮನ ಕುಟುಂಬಕ್ಕೆ ಕೊರೊನಾ ಬರಸಿಡಿಲು ಬಡಿದಂತಾಗಿದೆ. ಕಳೆದ ಐದು ತಿಂಗಳಿಂದ ತಾಯಿ ಸರೋಜಾಗೆ ಕೆಲಸ ಕೂಡ ಇಲ್ಲ ಇತ್ತ ಇದ್ದೊಬ್ಬ ಮಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು, ಆತನ ಆರೈಕೆ ಕೂಡ ಸರೋಜಿನಿಯವರೇ ಮಾಡುತ್ತಿದ್ದಾರೆ. ಗಂಡ ಕೂಡ ಮೃತಪಟ್ಟಿದ್ದರಿಂದ ತಾನೊಬ್ಬಳೇ ದುಡಿದು ಮಕ್ಕಳನ್ನು ಸಾಕುತ್ತಿರುವ ಸರೋಜಿನಿ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.

ಈ ಸಮಯದಲ್ಲಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಗಳು ರೇಣುಕಾಗೆ ಆನ್‍ಲೈನ್ ಕ್ಲಾಸ್ ಶುರುವಾಗಿದ್ದು, ಶಾಲೆಯ ಶಿಕ್ಷಕರು ಕರೆ ಮಾಡಿ ಮೊಬೈಲ್ ಅಥವಾ ಚಂದನ ಟಿವಿಯಲ್ಲಿ ಕ್ಲಾಸ್ ಕೇಳಲು ಹೇಳಿದ್ದಾರೆ. ಆದರೆ ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಕೂಡ ಇಲ್ಲದನ್ನು ಶಿಕ್ಷಕರ ಮುಂದೆ ರೇಣುಕಾ ಹೇಳಿದ್ದು, ಕಡೆ ಪಕ್ಷ ಮೊಬೈಲ್ ಆದರೂ ಕೊಂಡುಕೊಂಡು ಅದರಲ್ಲಿ ಪಾಠ ಕೇಳುವಂತೆ ಶಿಕ್ಷಕರು ಹೇಳಿದ್ದಾರೆ. ಇದನ್ನು ರೇಣುಕಾ ತಾಯಿ ಸರೋಜಿನಿಗೆ ಹೇಳಿದ್ದಾಳೆ. ಆಗ ಅವರು ತನ್ನ ಚಿನ್ನದ ಕಿವಿ ಓಲೆಯನ್ನ ಹತ್ತು ಸಾವಿರ ರೂಪಾಯಿಗೆ ಮಾರಿ ಅದರಲ್ಲಿ ಮಗಳಿಗೆ ಫೋನ್ ತಂದುಕೊಟ್ಟಿದ್ದಾರೆ.

ಮನೆ ಕೂಡ ಇಲ್ಲದೇ ತಗಡಿನ ಶೆಡ್‍ವೊಂದರಲ್ಲಿರುವ ಇವರು ಇದೀಗ ಮಳೆಯ ನೀರು ಕೂಡ ಒಳಗೆ ಬರುತ್ತಿದ್ದು ಬದುಕು ಸಾಗಿಸುವುದೇ ದುಸ್ತಾರವಾಗಿ ಬಿಟ್ಟಿದೆ. ಮಗಳು ಕೆಲಸ ಮಾಡುತ್ತೇನೆ ಅಂದರೂ ಅವಳನ್ನ ಕೆಲಸಕ್ಕೆ ಕಳುಹಿಸದೇ ಓದಿ ಅಧಿಕಾರಿ ಆಗುವಂತೆ ಹೇಳಿ ತನ್ನ ಚಿನ್ನದ ಕಿವಿ ಓಲೆ ಮಾರಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯ ತವರು ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಯಾವೊಬ್ಬ ಅಧಿಕಾರಿಗಳು ಕೂಡ ಇವರ ಸಹಾಯಕ್ಕೆ ಬಂದಿಲ್ಲ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×