ಬೆಳಗಾವಿ: ಸಿಆರ್ ಪಿಎಫ್ ಕಮಾಂಡೊನ ಮೇಲೆ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಕರೆದೊಯ್ದು ಚೈನ್ ನಲ್ಲಿ ಕಟ್ಟಿಹಾಕಿದ ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶಿಸಿದ್ದಾರೆ.
ಸಿಆರ್ ಪಿಎಫ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸಂಜಯ್ ಅರೋರ ಅವರ ಕೋರಿಕೆ ಮೇರೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ 590 ಕಿಲೋ ಮೀಟರ್ ದೂರದಲ್ಲಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲ್ಗ ಎಂಬಲ್ಲಿ ಸಿಆರ್ ಪಿಎಫ್ ನ ಕೋಬ್ರಾ ಘಟಕದ ಕ್ಯಾಡೆಟ್ ಸಚಿನ್ ಸಾವಂತ್ ರಜೆಗೆಂದು ಊರಿಗೆ ಬಂದಿದ್ದರು. ತಮ್ಮ ಮನೆ ಮುಂದೆ ಮಾಸ್ಕ್ ಧರಿಸದೆ ವಾಹನ ತೊಳೆಯುತ್ತಿದ್ದಾಗ ಅಲ್ಲಿಗೆ ಬಂದ ಸ್ಥಳೀಯ ಪೊಲೀಸರು ಮಾಸ್ಕ್ ಧರಿಸಲಿಲ್ಲವೇಕೆ ಎಂದು ಬೈದು, ಹಲ್ಲೆ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದು ಚೈನ್ ನಲ್ಲಿ ಕಟ್ಟಿಹಾಕಿದ್ದರು.
ಈ ಘಟನೆ ನಡೆದಿದ್ದು ಏಪ್ರಿಲ್ 23ರಂದು. ಯೋಧನನ್ನು ಚೈನಿನಲ್ಲಿ ಕಟ್ಟಿಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೆಹಲಿಯಲ್ಲಿನ ಸಿಆರ್ ಪಿಎಫ್ ಕೇಂದ್ರ ಕಚೇರಿಯ ಅಧಿಕಾರಿಗಳ ಗಮನಕ್ಕೆ ಬಂದು ರಾಜ್ಯ ಸರ್ಕಾರ ಬಳಿ ವಿವರಣೆ ಕೇಳಿದ್ದರು.
Follow us on Social media