Breaking News

ಬೆಂಗಳೂರು : ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರಕಾರ ಸೂಚನೆ ನೀಡಿಲ್ಲ: ಇಂಧನ ಸಚಿವರ ಸ್ಪಷ್ಟನೆ

ಬೆಂಗಳೂರು: ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರಕಾರ ಯಾವುದೇ ಸೂಚನೆ ನೀಡಿಲ್ಲ. ಕಲ್ಲಿದ್ದಲು ಹಾಗೂ‌‌ ಪೆಟ್ರೋಲಿಯಂ‌ ಉತ್ಪನ್ನಗಳ ಮಾರುಕಟ್ಟೆ ದರ ಆಧರಿತ ಹೊಂದಾಣಿಕೆ ವೆಚ್ಚದಲ್ಲಿ‌ ಮಾತ್ರ ವ್ಯತ್ಯಾಸವಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರಕಾರ ಮುಂದಾಗಿದೆ ಎಂಬ ಬಗ್ಗೆ ಕೆಲವೆಡೆ ತಪ್ಪು ಸಂದೇಶ ರವಾನೆಯಾಗಿದೆ. ಆದರೆ ರಾಜ್ಯ ಸರಕಾರದ ಮುಂದೆ ಅಂಥ ಯಾವುದೇ ಪ್ರಸ್ತಾಪವಿಲ್ಲ.‌

ವಿದ್ಯುತ್ ದರವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಿಸುವುದು ವಾಡಿಕೆಯಾಗಿದೆ. ಹೀಗಾಗಿ ದರ ಹೆಚ್ಚಳದ ವದಂತಿ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ 13 ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವಿರುತ್ತದೆ.‌ ಇವುಗಳ ಮಾರುಕಟ್ಟೆ ದರದ ಏರಿಳಿತ ಆಧರಿಸಿ ಎಲ್ಲ ವಿದ್ಯುತ್ ಸರಬರಾಜು‌‌ ಕಂಪನಿ ವ್ಯಾಪ್ತಿಯಲ್ಲಿ‌ ಪ್ರತಿ ಮೂರು ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ನಡೆಸುವುದು ನಿರಂತರ ಪ್ರಕ್ರಿಯೆ ಆಗಿರುತ್ತದೆ.

ಈ ಸಂಬಂಧ ಎಸ್ಕಾಂಗಳು ಸಲ್ಲಿಸಿದ ಹೊಂದಾಣಿಕೆ ವೆಚ್ಚ ( fuel cost adjustment charges ) ಪ್ರಸ್ತಾಪ ಹಿನ್ನೆಲೆಯಲ್ಲಿ‌ ಕೆಇಆರ್ ಸಿ ಈ ದರ ಪರಿಷ್ಕರಿಸಿದೆ.

ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಕೆಇಆರ್ ಸಿ ವಿವೇಚನಾಧಿಕಾರವಾಗಿದ್ದು‌‌ ಕಲ್ಲಿದ್ದಲು ದರ ಆಧರಿಸಿ ಈ ಹೊಂದಾಣಿಕೆ ವೆಚ್ಚ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು.

ಹೀಗಾಗಿ ಈ ಪ್ರಕ್ರಿಯೆಯನ್ನು ವಾರ್ಷಿಕ ದರ ಪರಿಷ್ಕರಣೆ ಜತೆ ಥಳುಕು ಹಾಕುವ ಅಗತ್ಯವಿಲ್ಲ ಎಂದು ಸುನೀಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×