ಬೆಂಗಳೂರು : ಬಿಜೆಪಿಯ ಸುಳ್ಳುಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಬೇಕು. ಮುಂದಿನ ಚುನಾವಣೆಯವರೆಗೂ ಯಾರೂ ನಿದ್ರಿಸದೆ ಕೆಲಸ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಳನ್ನೇ ಹತ್ತು ಬಾರಿ ಹೇಳಿ ಬಿಜೆಪಿ ಸತ್ಯವೆಂದು ಜನರನ್ನು ನಂಬಿಸುತ್ತಿದೆ. ಆದರೆ ನಾವು ಸತ್ಯ ಹೇಳಿದರೂ ಜನ ಅದನ್ನು ಅರ್ಥೈಸಿಕೊಳ್ಳುತ್ತಿಲ್ಲ. ಹೀಗಾಗಿ ಬಿಜೆಪಿಯ ಸುಳ್ಳುಗಳನ್ನು ಮತ್ತು ನಮ್ಮ ಸತ್ಯಗಳನ್ನು ಜನರ ಮನಸ್ಸಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು. ಇದಕ್ಕಾಗಿ ನಿರಂತರ ಹೋರಾಟ ಅಗತ್ಯ ಎಂದರು.
ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿಯವರನ್ನು ಹೊರತುಪಡಿಸಿ ಬೇರಾರನ್ನೂ ವೈಯಕ್ತಿಕವಾಗಿ ಕರೆದಿಲ್ಲ. ಆದರೆ ಪ್ರಸ್ತುತ ಎಲ್ಲರಿಗೂ ಸಾಮೂಹಿಕ ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಸ್ವ ಇಚ್ಛೆಯಿಂದ ಕಾರ್ಯಕ್ರಮಕ್ಕೆ ಬರಬೇಕು. ಅರಮನೆ ಮೈದಾನದಲ್ಲಿ ಜುಲೈ 13ರಂದು ಈ ಸಂಬಂಧ ಪೂರ್ವ ಸಿದ್ದತಾ ಸಭೆ ನಡೆಯಲಿದೆ. ಎಲ್ಲರೂ ಭಾಗವಹಿಸಬೇಕು ಎಂದು ಆಮಂತ್ರಿಸಿದರು.
ದಾವಣಗೆರೆಯಲ್ಲಿ ಪಕ್ಷದ ವೇದಿಕೆಯಲ್ಲೇ ನಡೆಯುವ ವಿರೋಧ ಪಕ್ಷದ ನಾಯಕರ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
Follow us on Social media