ಹೈದರಾಬಾದ್: ಮುಂದಿನ 30 ರಿಂದ 40 ವರ್ಷಗಳು ಬಿಜೆಪಿಯ ಕಾಲವಾಗಿದ್ದು, ಈ ಸಮಯದಲ್ಲಿ ಭಾರತವು ವಿಶ್ವ ಗುರುವಾಗಲಿದೆ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್‌ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದಾರೆ. ಕುಟುಂಬ ರಾಜಕಾರಣ, ಜಾತೀಯತೆ ಮತ್ತು ತುಷ್ಟೀಕರಣ ಈ ದೇಶದ ರಾಜಕೀಯಕ್ಕೆ ದೊಡ್ಡ ಶಾಪವಾಗಿದ್ದು, ಇದು ದೇಶದ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಶಾ ಹೇಳಿದರು.
ತೆಲಂಗಾಣ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಕುಟುಂಬ ಆಡಳಿತವನ್ನು ಕೊನೆಗೊಳಿಸಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವರು ಹೇಳಿದರು. 2014ರಿಂದಲೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಈ ರಾಜ್ಯಗಳಲ್ಲಿ ಅಧಿಕಾರದಿಂದ ಹೊರಗುಳಿದಿದೆ.
ದಿವಂಗತ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪು ಐತಿಹಾಸಿಕ ಎಂದು ಅಮಿತ್ ಶಾ ಹೇಳಿದರು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ 64 ಮಂದಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್ ನೀಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಮೋದಿ ಅವರು ಗಲಭೆಯಲ್ಲಿ ತಮ್ಮ ಪಾತ್ರದ ಬಗ್ಗೆ ಎಸ್‌ಐಟಿ ತನಿಖೆಯನ್ನು ಎದುರಿಸಿದರು. ಹಾಗೂ ಸಂವಿಧಾನದ ಮೇಲಿನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದು ಶಾ ಹೇಳಿದರು.
ಮೋದಿ ಕೂಡ ಶಿವನಂತೆಯೇ ತನ್ನ ಮೇಲೆ ಎಸೆದ ಎಲ್ಲಾ ವಿಷಗಳನ್ನು ಜೀರ್ಣಿಸಿಕೊಂಡಿದ್ದಾರೆ. ಕಾಂಗ್ರೆಸ್ ಒಂದು ಕುಟುಂಬದ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಗೃಹ ಸಚಿವರು ಹೇಳಿದರು, ಪಕ್ಷದೊಳಗೆ ಪ್ರಜಾಪ್ರಭುತ್ವಕ್ಕಾಗಿ ಅನೇಕ ಸದಸ್ಯರು ಹೋರಾಡುತ್ತಿದ್ದಾರೆ. ಪಕ್ಷದ ಮೇಲಿನ ಹಿಡಿತ ತಪ್ಪುವ ಭೀತಿಯಲ್ಲಿರುವ ಗಾಂಧಿ ಕುಟುಂಬ ಆಂತರಿಕ ಸಂಘಟನೆ ಚುನಾವಣೆಗೆ ಅವಕಾಶ ನೀಡುತ್ತಿಲ್ಲ ಎಂದರು. ಪ್ರತಿಪಕ್ಷಗಳು ಅತೃಪ್ತರಾಗಿದ್ದು, ಸರ್ಕಾರ ಏನೇ ಒಳ್ಳೆಯ ಕೆಲಸ ಮಾಡಿದರೂ ವಿರೋಧಿಸುತ್ತಲೇ ಬಂದಿವೆ ಎಂದರು.
Follow us on Social media