ಕಾಲ್ಚಿನಿ: ಬಿಜೆಪಿ ಕಾರ್ಯಕರ್ತರು ಬಲವಂತದಿಂದ ಮತಗಟ್ಟೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದು, ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಟಿಎಂಸಿ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಮಂಗಳವಾರ ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂತಹ ಬೆದರಿಕೆ ತಂತ್ರಗಳಿಗೆ ಬಗ್ಗಲ್ಲ ಎಂದು ಗುಡುಗಿದ್ದಾರೆ.
ಅಲಿಪುರ್ ದೌರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಪಕ್ಷದ ಅಭ್ಯರ್ಥಿ ಸುಜಾತ ಮಂಡಲ್ ಅವರನ್ನು ಬಿಜೆಪಿ ಕಾರ್ಯಕರ್ತರು ಅಟ್ಟಾಡಿಸಿಕೊಂಡು ಹೋಗಿ, ಮತಗಟ್ಟೆಯೊಂದರ ಬಳಿ ಅವರ ತಲೆಗೆ ಹೊಡೆದಿದ್ದಾರೆ. ಖಾನಾಕುಲ್ ನಲ್ಲಿ ಮತ್ತೋರ್ವ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ ಕ್ಯಾನಿಂಗ್ ಈಸ್ಟ್ ನಲ್ಲಿ ನಮ್ಮ ಅಭ್ಯರ್ಥಿ ಶೌಕತ್ ಮೊಲ್ಹಾ ಅವರನ್ನು ಬೂತ್ ಬಳಿಗೆ ಭದ್ರತಾ ಸಿಬ್ಬಂದಿ ಬಿಟ್ಟಿಲ್ಲ. ಟಿಎಂಸಿ ಪಕ್ಷದ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆಯಂತಹ ಹಲವಾರು ಘಟನೆಗಳು ಪಶ್ಚಿಮ ಬಂಗಾಳ ರಾಜ್ಯಾದ್ಯಂತ ನಡೆಯುತ್ತಿರುವುದಾಗಿ ಹೇಳಿದರು.
ಇಂದು ಬೆಳಗ್ಗೆಯಿಂದ ಹಲ್ಲೆ, ಹಿಂಸಾಚಾರದ ಬಗ್ಗೆ 100 ದೂರುಗಳನ್ನು ಸ್ವೀಕರಿಸಿದ್ದೇನೆ. ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇನೆ ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಚುನಾವಣಾ ರ‍್ಯಾಲಿಯಲ್ಲಿ ಕಳಪೆ ಸಾಧನೆ ಅನುಭವದ ನಂತರ ದೆಹಲಿಯಲ್ಲಿನ ಬಿಜೆಪಿ ನಾಯಕರು ಇಂತಹ ಪಿತೂರಿನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, ಬೂತ್ ಗಳಲ್ಲಿ ಏನೇ ಆಕ್ರಮ ನಡೆದರೂ ತಡೆಗಟ್ಟದಂತೆ ಭದ್ರತಾ ಸಿಬ್ಬಂದಿಗೆ ಹೇಳಲಾಗಿದೆ. ಚುನಾವಣೆ ಆರಂಭವಾದಾಗಿನಿಂದಲೂ ನಮ್ಮ ಪಕ್ಷದ ನಾಲ್ವರ ಹತ್ಯೆಯಾಗಿದೆ. ಆದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ ಬಿಜೆಪಿಯ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದಿದ್ದಾರೆ.
Follow us on Social media