ನವದೆಹಲಿ: 2005ರಲ್ಲಿ ಕಾಂಗ್ರೆಸ್ ನೇತೃತ್ವದ ಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ 20 ಲಕ್ಷ ರೂಪಾಯಿಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ರಾಜೀವ್ ಗಾಂಧಿ ಫೌಂಡೇಶನ್ ಗೆ ವರ್ಗಾವಣೆ ಮಾಡಲಾಗಿತ್ತು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಬಿಜೆಪಿ ಆರೋಪದಲ್ಲಿ ಅರ್ಧ ಸತ್ಯವಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ಕ್ಷುಲ್ಲಕ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಒಂದು ವೇಳೆ ರಾಜೀವ್ ಗಾಂಧಿ ಫೌಂಡೇಶನ್ 20 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಿದರೆ ಅತಿಕ್ರಮಣವನ್ನು ಚೀನಾ ನಿಲ್ಲಿಸಿ ಸೇನೆಯನ್ನು ಲಡಾಕ್ ಗಡಿಭಾಗದಿಂದ ಹಿಂತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ದೇಶಕ್ಕೆ ಭರವಸೆ ನೀಡಬಹುದೇ ಎಂದು ಪ್ರಶ್ನಿಸಿದರು.
ಯಾವುದೇ ಫೌಂಡೇಶನ್ ಗಳು, ಚಿಂತಕರ ವೇದಿಕೆಗಳು ಧನ ಸಹಾಯ, ಪ್ರಚಾರಗಳಿಂದ ನಡೆಯುತ್ತವೆ ಎಂಬುದು ಸಾಮಾನ್ಯ ಜ್ಞಾನ ಸಂಗತಿ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್ ಸಿಆರ್ ಎ) ವಿಚಾರದಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಹಣದ ಲೆಕ್ಕಪತ್ರಗಳನ್ನು ಸರಿಯಾಗಿ ತೋರಿಸಿದೆ. ಅಂದಿನ ಯುಪಿಎ ಸರ್ಕಾರ ಹಣ ಸ್ವೀಕರಿಸಿದ ಬಗ್ಗೆ ದಾಖಲೆಗಳಲ್ಲಿ ತೋರಿಸಿದ್ದು ಅದರಲ್ಲಿ ಯಾವುದೇ ರಹಸ್ಯಗಳಿಲ್ಲ, ಅದು ಮುಗಿದ ಅಧ್ಯಾಯ, ಅದನ್ನು ಈಗ ಬಿಜೆಪಿ ನಾಯಕರು ಕೆದಕುವುದರಲ್ಲಿ ಅರ್ಥವೇನಿದೆ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಅಂದು ಯುಪಿಎ ಸರ್ಕಾರ ಪಡೆದಿದ್ದ ಹಣವನ್ನು ಅಂಡಮಾನ್ ಮತ್ತು ನಿಕೊಬಾರ್ ನಲ್ಲಿ ಸುನಾಮಿ ಪರಿಹಾರ ಕೆಲಸಗಳಿಗೆ ಬಳಸಿಕೊಳ್ಳಲಾಗಿತ್ತು. ಆರೋಪ ಮಾಡುವ ಮೊದಲು ವಾಸ್ತವ ಸತ್ಯಗಳನ್ನು ತಿಳಿದುಕೊಳ್ಳಬೇಕು, ಅನಗತ್ಯ ವಿಚಾರಗಳನ್ನು ಮಾತನಾಡುತ್ತಾ ಸಮಯ ಕಳೆಯುವ ಬದಲು ಭಾರತದ ಪ್ರಾಂತ್ಯದೊಳಗೆ ಚೀನಾ ಅತಿಕ್ರಮಣ ಮಾಡುತ್ತಿರುವ ಬಗ್ಗೆ ಗಮನಹರಿಸಿ ಎಂದು ಚಿದಂಬರಂ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ತಿರುಗೇಟು ನೀಡಿದ್ದಾರೆ.
Follow us on Social media