ಢಾಕಾ: ಬಾಂಗ್ಲಾದೇಶ ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಾಜಾಗೆ ಕೊರೋನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬಾಂಗ್ಲಾದೇಶದ ಪ್ರಮುಖ ದೈನಿಕ ಪತ್ರಿಕೆ ಢಾಕಾ ಟ್ರಿಬ್ಯೂನ್ ವರದಿ ಮಾಡಿದ್ದು, ಗುರುವಾರ ರಾತ್ರಿ ಮೊರ್ತಾಜಾ ಜ್ವರದಿಂದಾಗಿ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ವರದಿ ಬಹಿರಂಗವಾಗಿದ್ದು, ಮಶ್ರಫೆ ಮೊರ್ತಾಜಾಗೆ ಕೊರೋನಾ ಸೋಂಕು ದೃಢಪಟ್ಟಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕುಟುಂಬಸ್ಥರನ್ನೂ ಕೂಡ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಫೆಬ್ರವರಿಯಲ್ಲಿ ಮೊರ್ತಾಜಾ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಬಳಿಕ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ ಮಾಡದಿದ್ದರೂ ಕ್ರಿಕೆಟ್ ನಿಂದ ದೂರ ಉಳಿಯುವುದಾಗಿ ಹೇಳಿದ್ದರು.
ಇತ್ತ ಬಾಂಗ್ಲಾದೇಶ ಕ್ರಿಕೆಟಿಗರಲ್ಲೂ ಕೊರೋನಾ ಸೋಂಕು ಕಂಡುಬರುತ್ತಿದ್ದು, ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಸಹೋದರ ನಫೀಸ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. 2003ರಲ್ಲಿ ನಫೀಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
Follow us on Social media