ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಶರೀಫ್ ಎಂಬಾತನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಜೀಪ ಮುನ್ನೂರು ಗ್ರಾಮದ ಆಲಂಪಾಡಿಯಲ್ಲಿ ವರದಿಯಾಗಿದೆ.
ಆದರೆ ಆತ ಓಡಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ ಶಾರದಾ ನಗರದ ನಿವಾಸಿಯಾದ ಶರೀಫ್ ಮನೆಯಿಂದ ಮಸೀದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಎರಡು ಬೈಕ್, ಒಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ ಎನ್ನಲಾಗಿದೆ.
ಶರೀಫ್ ತೆರಳುತ್ತಿದ್ದ ಬೈಕಿಗೆ ದುಷ್ಕರ್ಮಿಗಳು ತಾವಿದ್ದ ಬೈಕನ್ನು ಢಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ನಲ್ಲಿದ್ದ ಹಿಂಬದಿ ಸವಾರರು ಮತ್ತು ಕಾರಿನಲ್ಲಿದ್ದವರು ಇಳಿದು ಶರೀಫ್ ಗೆ ತಲವಾರು ಬೀಸಿದ್ದಾರೆ. ಅಪಾಯದ ಅರಿವಾದ ಶರೀಫ್ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಶರೀಫ್ ಗೆ ಬೈಕ್ ನಿಂದ ಬಿದ್ದ ಸಣ್ಣ ಪುಟ್ಟ ಗಾಯಗಳಾಗಿದ್ದು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸಜೀಪ ಮುನ್ನೂರು ನಿವಾಸಿ, ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಬಿ.ಸಿ.ರೋಡ್ ಲಾಂಡ್ರಿಯೊಂದರ ಮಾಲಿಕ ಶರತ್ ಮಡಿವಾಳ ಎಂಬವರನ್ನು 2017ರಲ್ಲಿ ಲಾಂಡ್ರಿ ಒಳಗೆ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಶರೀಫ್ ಆರೋಪಿಯಾಗಿದ್ದಾನೆ.
2017ರ ಜುಲೈನಲ್ಲಿ ರಾತ್ರಿ ವೇಳೆ ತನ್ನ ಲಾಂಡ್ರಿ ಶಾಪ್ ಮುಚ್ಚಿ ಮನೆಗೆ ತೆರಳುವ ವೇಳೆ ದುಷ್ಕರ್ಮಿಗಳ ತಂಡವೊಂದು ಶರತ್ ಮಡಿವಾಳನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ನಂತರ ಅಲ್ಲೇ ಇದ್ದ ಅಶ್ರಫ್ ಅವರು ಶರತ್‌ನನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದರು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.
Follow us on Social media