ಬಂಟ್ವಾಳ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ-ನಗದು ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಶ್ರೀಮಂಗಳ, ಉರ್ಬನ ಕಂಪೌಂಡ್ ನಿವಾಸಿ ಚಂದ್ರಶೇಖರ ಸಾಲ್ಯಾನ್ ಅವರ ಮನೆಯಲ್ಲಿ ಜೂ.11ರಂದು ಕಳ್ಳತನ ಮಾಡಲಾಗಿದೆ.
ಒಟ್ಟು 2 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ವಿವಿಧ ಸೊತ್ತುಗಳನ್ನು ಕಳವು ಮಾಡಲಾಗಿದೆ.
ಮೂಡಬಿದ್ರೆಯ ಅರೇಬಿಯನ್ ರೆಸ್ಟೋರೆಂಟ್ ನಲ್ಲಿ ಕೆಲಸದಲ್ಲಿದ್ದು ಚಂದ್ರಶೇಖರ್ ಅವರ ಪತ್ನಿಗೆ ಜ್ವರವಿದ್ದುದರಿಂದ ಪತ್ನಿ ಮಗಳೊಂದಿಗೆ ಮೂಡಬಿದಿರೆಯ ರಿಂಗ್ ರೋಡ್‌ನಲ್ಲಿರುವ ಅತ್ತೆ ಮನೆಯಲ್ಲಿದ್ದ ಜೂನ್ 11 ರಿಂದ 13 ವರೆಗೆ ಅಲ್ಲಿಯೇ ತಂಗಿದ್ದರು.
ಜೂನ್ 13 ರಂದು ಸಂಜೆ ವೇಳೆ ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲು ತೆರೆದ ಸ್ಥಿತಿಯಲ್ಲಿ ಇದ್ದುದರಿಂದ ಒಳಗೆ ಹೋಗಿ ನೋಡಿದಾಗ ಕಪಾಟಿನ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಬಂಗಾರ ಹಾಗೂ ನಗದು ಕಳವು ಮಾಡಲಾದ ಬಗ್ಗೆ ಗಮನಕ್ಕೆ ಬಂದಿದೆ.
20,000 ಬೆಲೆಯ ರಾಡ್ಯೋ ವಾಚ್ ಕಪಾಟಿನ ಲಾಕರ್‌ನೊಳಗೆ ಇರಿಸಿದ 32 ಗ್ರಾಂ ತೂಕದ ಚಿನ್ನದ ಚೈನ್,12 ಗ್ರಾಂ ತೂಕದ ಚಿನ್ನದ ಉಂಗುರ ,8ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ನಗದು ರೂ 6,000/- ಹಾಗೂ
10,000 ಬೆಲೆಬಾಳುವ 4 ಬೆಳ್ಳಿಯ ದೀಪಗಳನ್ನು ಕೂಡ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಗ್ರಾಮಾಂತರ ಎಸ್.ಐ.ಹರೀಶ್ ಹಾಗೂ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow us on Social media