ಬೆಂಗಳೂರು: ಕೋವಿಡ್ ನಿಂದ ಗುಣಮುಖರಾಗಿರುವವರು ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡುವ ಮೂಲಕ ಅವರ ಚಿಕಿತ್ಸೆಗೆ ಸಹಕಾರ ನೀಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಪ್ಲಾಸ್ಮಾದಾನ ಮಾಡುವವರಿಗೆ ಸರ್ಕಾರದಿಂದ 5000 ರೂ. ಪ್ರೋತ್ಸಾಹಧನ ನೀಡಿಲಿದ್ದೇವೆ. ರಾಜ್ಯದಲ್ಲಿ ಈಗಾಗಲೇ ಕೊರೋನಾ ಸೋಂಕಿನಿಂದ ಗುಣಮುಖರಾದವರು 17,370 ಜನರಿದ್ದಾರೆ. ಐಸಿಯುನಲ್ಲಿ 597 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹವರ ಚಿಕಿತ್ಸೆಗೆ ಗುಣಮುಖರಾದವರ ಪ್ಲಾಸ್ಮಾ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ಲಾಸ್ಮಾ ದಾನ ಮಾಡುವಂತೆ ಸಚಿವರು ಮನವಿ ಮಾಡಿದ್ದಾರೆ.
ಬೆಂಗಳೂರಿನ ಎಲ್ಲಾ ವಲಯಗಳ ಬೂತ್ ಕಾರ್ಯಪಡೆಯನ್ನು ರಚಿಸಲು ಆದೇಶ ನೀಡಿದ್ದೇನೆ. ಈ ಸಂಬಂಧ ನೋಡಲ್ ಅಧಿಕಾರಿ ಗಳೊಂದಿಗೆ ಚೆರ್ಚಿಸಲಾಗಿದ್ದು, 2 ದಿನಗಳಲ್ಲಿ ನಗರದ ಎಲ್ಲಾ ಬೂತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಲು ನಿರ್ದೇಶನ ನೀಡಲಾಗಿದೆ. ಸದಸ್ಯರ ಕರ್ತವ್ಯ ಮತ್ತು ನಿರ್ವಹಿಸಬೇಕಾದ ಕೆಲಸಗಳ ಕುರಿತು ಮಾರ್ಗಸೂಚಿ ನೀಡಲಾಗುವುದು ಎಂದರು.
ಲಾಕ್ ಡೌನ್ ಅವಧಿಯಲ್ಲಿ ಮನೆಮನೆ ಸಮೀಕ್ಷೆ ನಡೆಸಿ 60 ವರ್ಷ ಮೇಲ್ಪಟ್ಟವರಿಗೆ ರಿವರ್ಸ್ ಐಸೋಲೇಶನ್ ಮಾಡಲು ಸೂಚನೆ ನೀಡಲಾಗುವುದು. ಅಲ್ಲದೆ ಹಾಸಿಗೆ ವ್ಯವಸ್ಥೆ, ಆಂಬುಲೆನ್ಸ್ ಒದಗಿಸುವುದು ಮುಂತಾದ ನಿರ್ಧಾರಗಳನ್ನು ಕಾರ್ಯಪಡೆ ತೆಗೆದುಕೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದು ಇಂದಿಗೆ 9 ಲಕ್ಷ ಕೋವಿಡ್ ಟೆಸ್ಟ್ ಗಳನ್ನು ಪೂರ್ಣಗೊಳಿಸಲಾಗಿದೆ. ಇಂದು ಒಂದೇ ದಿನ 22,204 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಇಂದು 3000 ಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದು , ಬೆಂಗಳೂರಿನಲ್ಲಿ 1975 ಮಂದಿಗೆ ಕೊರೋನಾ ದೃಢಪಟ್ಟಿದೆ ಎಂದರು.
Follow us on Social media